
ಮೈಸೂರು, ಮೇ 21- ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಲ್ಪಾವಧಿ ಸರ್ಕಾರ ಎಂದು ಶಾಸಕ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ನಿರೀಕ್ಷೆ ಇದದ್ದು ಬೇರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಜನರು ಬಯಸಿದ್ದರು. ಆದರೆ ನಂಬರ್ ಗೇಮ್‍ನಿಂದ ಸರ್ಕಾರ ರಚಿಸಲು ನಮಗೆ ಹಿನ್ನೆಡೆಯಾಗಿದೆ ಎಂದರು.
ಅಧಿಕಾರಕ್ಕಾಗಿ ಒಂದಾಗಿರುವ ಪಕ್ಷಗಳನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ. ಬಹುಮತ ಸಾಬೀತಾದ ನಂತರ ಈ ಸರ್ಕಾರ ಕಡೆ ದಿನಗಳನ್ನು ಎಣಿಸುತ್ತದೆ ಎಂದು ಟೀಕಿಸಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಪ್ರಕೃತಿ ವಿರೋಧಿ ಸರ್ಕಾರವಾಗಿದ್ದು ,ಇದು ಬಹಳ ದಿನಗಳ ಕಾಲ ಉಳಿಯುವುದಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕೊನೆಯ ಕಾಂಗ್ರೆಸ್ ಸರ್ಕಾರ, ಸಿದ್ಧರಾಮಯ್ಯ ಕೊನೆ ಸಿಎಂ ಎಂದು ನಾವು ಹೇಳಿದ್ದೆವು. ಈಗ ಹಾಗೆಯೇ ಆಗಿದೆ. ಅವಕಾಶವಾದಿ ರಾಜಕಾರಣಿಗಳನ್ನು ಜನರು ಎಂದೂ ಕ್ಷಮಿಸುವುದಿಲ್ಲ ಎಂದು ಅವರು ಟೀಕಸಿದರು.