ವಿಶ್ವದ ಅತಿ ಎತ್ತರದ ಶಿಖರದಲ್ಲಿ ಹಾರಾಡಿತು ಕನ್ನಡ ಧ್ವಜ!

ಹುಣಸೂರು, ಮೇ 21- ವಿಶ್ವದ ಅತಿ ಎತ್ತರದ ಶಿಖರದಲ್ಲಿ ಹಾರಾಡಿತು ಕನ್ನಡ ಧ್ವಜ ರಾರಾಜಿಸಿತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ರಕ್ಷಕ ಸಿ.ವಿಕ್ರಂ ಅವರು ಪ್ರಪಂಚದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ.
ಶಿಖರವೇರಿದ ನಂತರ ಹೆಗ್ಗುರುತಿಗಾಗಿ ಕನ್ನಡ ದ್ವಜ, ಅಂಬೇಡ್ಕರ್, ಅಬ್ದುಲ್ ಕಲಾಂ, ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮಿ, ಅಣ್ಣಾಹಜಾರೆ, ಇತ್ತೀಚೆಗಷ್ಟೆ ಹುತ್ಮಾತರಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಿಸಿಎಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಣಿಕಂಠನ್ ಭಾವಚಿತ್ರವನ್ನು ಮೌಂಟ್ ಎವರೆಸ್ಟ್ ಮೇಲೆ ರಾರಾಜಿಸುವ ಮೂಲಕ ಕನ್ನಡಿಗರ ಕೀರ್ತಿ ಪತಾಕೆಯನ್ನು ಎತ್ತರದ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.
ಕರ್ನಾಟಕದಿಂದ ಏಕೈಕ ಪ್ರತಿನಿಧಿ : ಎವರೆಸ್ಟ್ ಆರೋಹಣವನ್ನು ಯಶಸ್ವಿಯಾಗಿ ಪೂರೈಸಿದ ವಿಕ್ರಮ್ ಬೇಸ್ಕ್ಯಾಂಪ್ ತಲುಪಿದ್ದು ತಮ್ಮ ಸಾಧನೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇವರು ಹೈದರಾಬಾದಿನ ಟ್ರಾನ್ಸೆಂಟ್ ಅಡ್ವೆಂಚರ್ ಕ್ಲಬ್‍ನ ಮೂಲಕ ದೇಶದ ವಿವಿಧ ರಾಜ್ಯಗಳ 20 ಮಂದಿ ತಂಡದೊಂದಿಗೆ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಚಾರಣ ನಡೆಸಲು ತೆರಳಿದ್ದರು. ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದಲ್ಲಿ ಅರಣ್ಯ ರಕ್ಷ ಕರಾಗಿರುವ ವಿಕ್ರಂ ಅವರು ಎವರೆಸ್ಟ್ ಆರೋಹಣಕ್ಕೆ ಸಿಕ್ಕಿಂನ ಪರ್ವತ ಪ್ರದೇಶದಲ್ಲಿ 2016 ಮತ್ತು 17ರಲ್ಲಿ ಚಾರಣ ತರಬೇತಿ ಪಡೆದುಕೊಂಡಿದ್ದರು.
ಏಪ್ರಿಲ್ 18ರಂದು ನೇಪಾಳದ ಕಠ್ಮಂಡುವಿನ ಮೂಲಕ ಟಿಬೆಟ್‍ನ ಲಾಸಾಕ್ಕೆ ತೆರಳಿ ಅಲ್ಲಿಂದ ಪ್ರಪಂಚದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್‍ನ 8,850 ಮೀ (29,035 ಅಡಿ) ಎತ್ತರದ ನಾರ್ಥ್ ರೆಡ್ಜಿ ಪರ್ವತ ಪ್ರದೇಶದ ಮೂಲಕ ಚಾರಣ ಆರಂಭಿಸಿದ್ದರು.
ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ವಿಜಯಪುರ ಗ್ರಾಮದ ಚಂದ್ರನಾಯ್ಕರ ಪುತ್ರರಾಗಿರುವ ವಿಕ್ರಂ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದು, ಈ ಹಿಂದೆ ಕೆ.ಆರ್.ಡಿ.ಸಿ.ಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಪರಿಸರ ಕಾಳಜಿಯಿಂದಾಗಿ ಅರಣ್ಯ ಸೇವೆಗೆ ಸೇರಿದ್ದರು.
ಮ್ಯಾರಥಾನ್‍ನಲ್ಲೂ ಸಾಧನೆ: ಸಾಹಸಿ ಪ್ರವೃತ್ತಿಯ ವಿಕ್ರಂ ಪರಿಸರ ಸಂರಕ್ಷಣೆ ಕುರಿತು ಸಂಘ-ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆ ನಡೆಸಿದ 5 ಕಿ.ಮೀ. ಮ್ಯಾರಥಾನ್ನಲ್ಲಿಯೂ ಅಪೂರ್ವ ಸಾಧನೆ ಮಾಡಿದ್ದಾರೆ. ಉತ್ತಮ ಈಜು ಪಟುವೂ ಆಗಿರುವ ವಿಕ್ರಮ್ ಅರಣ್ಯ ಇಲಾಖೆ ಏರ್ಪಡಿಸಿದ್ದ ರಾಜ್ಯಮಟ್ಟದ ಈಜುಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದರು.
ಇವರನ್ನು ಸಿಎಫ್ ಆಗಿದ್ದ ಮಣಿಕಂಠನ್, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಿರಿಯ-ಕಿರಿಯ ಅಧಿಕಾರಿಗಳು ಪೆÇ್ರೀ ಮೌಂಟ್ ಎವರೆಸ್ಟ್ ಏರುವ ಅವರ ಛಲಕ್ಕೆ ಲP್ಷÁಂತರ ರೂ. ಹಣ ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಿ ಪ್ರೇರೇಪಿಸಿದ್ದರು.
ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಚಾರಣ ಮಾಡಿರುವ ವಿಕ್ರಂ ಅವರಿಂದಾಗಿ ಇಲಾಖೆಗೆ ಒಳ್ಳೆಯ ಹೆಸರು ಬಂದಿದೆ. ಅವರೀಗ ಸಂಪರ್ಕಕ್ಕೆ ಸಿಕ್ಕಿಲ್ಲ. ಇತ್ತೀಚೆಗಷ್ಟೆ ಎವರೆಸ್ಟ್ ಪರ್ವತಾರೋಹಣ ಕೈಗೊಂಡಿದ್ದ ಡಿಸಿಎಫ್ ಪ್ರಭಾಕರ್ ಅವರಿಂದಾಗಿ ಮಾಹಿತಿ ಬಂದಿದ್ದು, ಬೇಸ್ಕ್ಯಾಂಪ್ ಪ್ರದೇಶಕ್ಕೆ ಬಂದ ನಂತರವಷ್ಟೆ ಅವರ ಸಾಹಸಗಾಥೆ ತಿಳಿಯಲಿದೆ ಎಂದು ನಾಗರಹೊಳೆ ಸಿಎಫ್ ಆರ್.ರವಿಶಂಕರ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ