ಕುಮಾರಣ್ಣನ ಸಂಪುಟದಲ್ಲಿ ಎರಡು ಉಪ ಮುಖ್ಯಮಂತ್ರಿ ಹುದ್ದೆ: ಯಾರ್ಯಾರು ಉಪಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳು..? ಇಲ್ಲಿದೆ ಮಾಹಿತಿ

ಬೆಂಗಳೂರು:ಮೇ:21: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಎಚ್ ಡಿ ಕುಮಾರಸ್ವಾಮಿ ಸಂಪುಟದಲ್ಲಿ ಎರಡು ಉಪ ಮುಖ್ಯಮಂತ್ರಿ ಹುದ್ದೆ ರಚನೆಯಾಗುವ ಸಾಧ್ಯತೆ ಇರುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿರುವ ಬೆನ್ನಲ್ಲೇ ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ‘ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಬಗ್ಗೆ ಚರ್ಚೆ ನಡೆದಿರುವುದು ನಿಜ. ಈ ಬಗ್ಗೆ ಪಕ್ಷದ ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇನ್ನು ಬುಧವಾರ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿಎಂ ಆಗಿ ಕುಮಾರಸ್ವಾಮಿ ಅವರು ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದು, ಅಂದು ಯಾವುದೇ ಶಾಸಕರೂ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ಸಂಪುಟ ರಚನೆ ಸಂಬಂಧ ಚರ್ಚೆ ಮುಕ್ತಾಯದ ಬಳಿಕ ಮಂತ್ರಿಗಳ ಪ್ರಮಾಣ ವಚನ ನಡೆಯುತ್ತದೆ.

ಅಂತೆಯೇ ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ ಸದಸ್ಯರು ಸೇರಿ 15 ಮಂದಿ ಇರಲಿದ್ದಾರೆ. ಸಮಿತಿ ಅಧ್ಯಕ್ಷ ಸ್ಥಾನವನ್ನು ಯಾರು ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಸಮಿತಿಗೆ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್‌ ಉದ್ದೇಶಿಸಿದೆ.

ಇದೇ ಬುಧವಾರ ಎಚ್ ಡಿಕುಮಾರಸ್ವಾಮಿ ಅವರು ವಿಧಾನಸೌಧದ ಆವರಣದಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಸಂಪುಟ ರಚನೆ ಸಂಬಂಧ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮಂತ್ರಿ ಸ್ಥಾನ ಹಂಚಿಕೆ ಕಸರತ್ತಿನಲ್ಲಿ ತೊಡಗಿವೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ಉಪ ಮುಖ್ಯಮಂತ್ರಿ ಹುದ್ದೆ, ಗೃಹ ಸಚಿವಾಲಯವೂ ಸೇರಿದಂತೆ 18 ಸಚಿವ ಸ್ಥಾನ, ಜೆಡಿಎಸ್ 8 ಸಚಿವ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಇನ್ನು ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಬೇಕು. ಒಂದು ಸ್ಥಾನವನ್ನು ದಲಿತರಿಗೆ, ಇನ್ನೊಂದನ್ನು ಲಿಂಗಾಯತರಿಗೆ ನೀಡಬೇಕು ಎಂಬ ಒತ್ತಾಯ ಕಾಂಗ್ರೆಸ್‌ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದವರೊಬ್ಬರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಪಕ್ಷಕ್ಕೂ ಅನುಕೂಲವಾಗುತ್ತದೆ. ಲಿಂಗಾಯತ ಸಮುದಾಯದ ನಾಯಕ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದರು ಎಂದು ಬಿಜೆಪಿಯವರು ಈಗಾಗಲೇ ಪ್ರಚಾರ ಮಾಡುತ್ತಿದ್ದಾರೆ.

ಕನಿಷ್ಠಪಕ್ಷ ಉಪಮುಖ್ಯಮಂತ್ರಿ ಸ್ಥಾನವನ್ನು ಈ ಸಮುದಾಯದ ಶಾಸಕರಿಗೆ ನೀಡಿದರೆ ಪಕ್ಷಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು ಎಂದು ಕೆಲ ಕಾಂಗ್ರೆಸ್ ನಾಯಕರು ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಪಕ್ಷದ ಶಾಸಕರೆಲ್ಲ ಒಗ್ಗಟ್ಟಾಗಿರುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದೆ.

ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಕೂಡಾ ಡಿಸಿಎಂ ಸ್ಥಾನದ ಆಕಾಂಕ್ಷಿ ಎಂದು ಮೂಲಗಳು ತಿಳಿಸಿವೆ. ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದು ಬಹುತೇಕ ಖಚಿತ. ಇನ್ನೊಂದು ಸ್ಥಾನಕ್ಕಾಗಿ ಶಾಮನೂರು ಶಿವಶಂಕರಪ್ಪ ಪ್ರಬಲ ಆಕಾಂಕ್ಷಿ. ಎಂ.ಬಿ. ಪಾಟೀಲ ಹಾಗೂ ಎಚ್‌.ಕೆ. ಪಾಟೀಲ ಅವರೂ ಈ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ