
ರಾಂಚಿ, ಮೇ 20- ಜಾರ್ಖಂಡ್ನ ಲೇಡಿ ಸಿಂಗಂ ಎಂದೇ ಖ್ಯಾತರಾಗಿರುವ ಉಪ ವಿಭಾಗೀಯ ಅಧಿಕಾರಿ ಅಂಜಲಿ ಯಾದವ್ ಸಿನಿಮೀಯ ರೀತಿಯ ಮತ್ತೊಂದು ಕಾರ್ಯಾಚರಣೆ ಮೂಲಕ ದುಷ್ಟರಿಗೆ ದುಸ್ವಪ್ನವಾಗಿದ್ದಾರೆ. ಅಕ್ರಮ ಗಣಿ ಘಟಕಗಳನ್ನು ಧ್ವಂಸಗೊಳಿಸಿ ಅವರು ದಿಟ್ಟತನ ಪ್ರದರ್ಶಿಸಿದ್ದಾರೆ.
ಬುಧ್ಮು ಪ್ರದೇಶದಲ್ಲಿರುವ ಅಕ್ರಮ ಕಲ್ಲು ಕ್ರಷರ್ ಘಟಕಗಳ ಮೇಲೆ ನಿನ್ನೆ ದಾಳಿ ನಡೆಸಿದ ಅಂಜಲಿ, ತಾವೇ ಟ್ರ್ಯಾಕ್ಟರ್ ಏರಿ ಗಣಿಗಾರಿಕೆ ನೆಲಗಳನ್ನು ನಾಶಗೊಳಿಸಿದರು.
ದಾಳಿ ಮುನ್ಸೂಚನೆ ಅರಿತ ಅಕ್ರಮ ಕ್ರಷರ್ ಘಟಕಗಳ ಸಿಬ್ಬಂದಿ ಪರಾರಿಯಾಗಿದ್ಧಾರೆ. ಈ ಘಟಕಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವ್ಯಾಪಕ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಘಟಕಗಳು ಯಾವುದೇ ಅನುಮತಿ ಪಡೆಯದೇ ಅನಧಿಕೃತವಾಗಿ ದಂಧೆ ಮುಂದುವರಿಸಿವೆ. ಸ್ಥಳೀಯರ ನೆರವಿನಿಂದ ಲೇಡಿ ಸಿಂಗಂ ಅಂಜಲಿ ಈಗ ಅಕ್ರಮ ಗಣಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.