ಬಿಜೆಪಿ ಚಿತ್ತ ಈಗ ತೆಲಂಗಾಣ ರಾಜ್ಯದತ್ತ!

ಹೈದರಾಬಾದ್, ಮೇ 20-ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿ ಚಿತ್ತ ಈಗ ತೆಲಂಗಾಣ ರಾಜ್ಯದತ್ತ ನೆಟ್ಟಿದೆ. 2019ರಲ್ಲಿ ಲೋಕಸಭೆ ಜೊತೆಗೆ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯೂ ನಡೆಯುತ್ತಿರುವುದರಿಂದ ಬಿಜೆಪಿ ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಂಡಿದೆ.
ತೆಲಂಗಾಣದಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗಳು ನಡೆಯಲಿರುವುದರಿಂದ ಬಿಜೆಪಿ ಈಗಿನಿಂದಲೇ ಪೂರ್ವ ಸಿದ್ಧತೆಗಳಲ್ಲಿ ತೊಡಗಿದೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ರಾಜ್ಯ ಘಟಕದ ಅಧ್ಯಕ್ಷ ಕೆ.ಲಕ್ಷ್ಮಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಅಮಿತ್ ಷಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ. ತೆಲಂಗಾಣದಲ್ಲಿ ಲೋಕಸಭೆ ಜೊತೆಗೆ ರಾಜ್ಯ ವಿಧಾನಸಭೆಗೂ ಚುನಾವಣೆಗಳು ನಡೆಯಲಿರುವುದರಿಂದ ಈಗಿನಿಂದಲೇ ಪಕ್ಷವನ್ನು ಸದೃಢವಾಗಿ ಸಂಘಟಿಸುವಂತೆ ವರಿಷ್ಠರು ಸಲಹೆ ಮತ್ತು ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಅದೇ ರೀತಿ ಆಂಧ್ರಪ್ರದೇಶ, ಪಶ್ಚಿಮಬಂಗಾಳ ಮತ್ತು ಒಡಿಶಾ ರಾಜ್ಯಗಳ ಚುನಾವಣೆಗಳ ಬಗ್ಗೆಯೂ ಬಿಜೆಪಿ ಗಮನ ಕೇಂದ್ರೀಕೃತವಾಗಿದೆ. ಮುಂದಿನ ತಿಂಗಳ ತೆಲಂಗಾಣಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದು, ರಾಜಕೀಯ ಪರಿಸ್ಥಿತಿಯ ಮೌಲ್ಯಮಾಪನ ನಡೆಸಲಿದ್ದಾರೆ ಎಂದು ಲಕ್ಷಣ್ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸಾಂಸ್ಥಿಕವಾಗಿ ಸದೃಢವಾಗಿದೆ. ಚುನಾವಣೆಗೂ ಮುನ್ನವೇ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ನಾವು ಕಾರ್ಯತಂತ್ರ ರೂಪಿಸುತ್ತಿದ್ದೇವೆ. ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಈ ಯೋಜನೆ ಯಶಸ್ವಿಯಾಗಿದೆ. ಮಹಿಳೆಯರು ಮತ್ತು ಕುಟುಂಬದ ಸದಸ್ಯರನ್ನು ಬಿಜೆಪಿಯತ್ತ ಆಕರ್ಷಿಸಿ ಬೂತ್ ಮಟ್ಟದಿಂದಲೇ ಪಕ್ಷವನ್ನು ಬಲವರ್ಧನೆಗೊಳಿಸಲಾಗುವುದು ಎಂದು ಅವರು ವಿವರಿಸಿದರು.  ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನಗೊಳಿಸಿರುವ ಯಶಸ್ವಿ ಯೋಜನೆಗಳನ್ನು ಜನರಿಗೆ ಮತದಟ್ಟು ಮಾಡಿಕೊಟ್ಟು ಪಕ್ಷವನ್ನು ಮತ್ತಷ್ಟು ಬಲಗೊಳಿಸುವುದಾಗಿ ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ