ನವದೆಹಲಿ: ಮೇ-20: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ನಾಲ್ಕು ವಾರಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಸತತವಾಗಿ ಏರಿಕೆಯಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲಿನ ನಿಯಂತ್ರಣ ತೆಗೆದ ಬಳಿಕ ನಿಯಮಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗ ತೊಡಗಿದ್ದು, ಇಂದು ಮತ್ತೆ ಪೆಟ್ರೋಲ್ ದರದಲ್ಲಿ 33 ಪೈಸೆ ಏರಿಕೆಯಾಗಿದೆ. ಆ ಮೂಲಕ ರಾಜಧಾನಿ ದೆಹಲಿಯಲ್ಲೇ ಪ್ರತೀ ಲೀಟರ್ ಪೆಟ್ರೋಲ್ ದರ 76.24ರೂ ಗೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲೂ 26 ಪೈಸೆಯಷ್ಟು ಏರಿಕೆಯಾಗಿ ಡೀಸೆಲ್ ದರ 67.57ಕ್ಕೆ ಹೆಚ್ಚಳವಾಗಿದೆ.
ಹಾಲಿ ದರ ಇತಿಹಾಸದಲ್ಲೇ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದ್ದು, ಈ ಹಿಂದಿನ ದಾಖಲೆಯನ್ನು ಅಳಿಸಿಹಾಕಿದೆ. ಈ ಹಿಂದೆ ಕಳೆದ ಸೆಪ್ಟೆಂಬರ್ ನಲ್ಲಿ ದೆಹಲಿಯಲ್ಲಿ ದರ ಏರಿಕೆ ಪರಿಣಾಮ ಪೆಟ್ರೋಲ್ ದರ 76.06 ರೂ ಗೆ ತಲುಪಿತ್ತು, ಇದು ಈ ವರೆಗಿನ ಗರಿಷ್ಠ ದರ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಆ ದಾಖಲೆಯನ್ನೂ ಮುರಿದು ಪೆಟ್ರೋಲ್ ದರ 76.24ರೂ ಗೆ ಏರಿಕೆಯಾಗಿದೆ.
ಇನ್ನು ಪೆಟ್ರೋಲ್ ದರ ವಿವಿಧ ರಾಜ್ಯಗಳಲ್ಲಿ ವಿವಿಧ ದರಗಳಿದ್ದು, ಆಯಾ ಜಿಲ್ಲೆಗಳಲ್ಲಿ ಹಾಲಿ ಇರುವ ದರದಲ್ಲೇ 33 ಪೈಸೆ ಏರಿಕೆಯಾಗಲಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.