ಬೆಂಗಳೂರು:ಮೇ-೧೯: ಬಿಎಸ್ ಯಡಿಯೂರಪ್ಪ ನವರು ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವ ಮುನ್ನವೇ ರಾಜೀನಾಮೆ ಘೋಷಣೆಮಾಡಿ ಹೊರನಡೆದರು. ಇದೊಂದು ರಾಜ್ಯ ರಾಜಕಾರಣದಲ್ಲೇ ಐತಿಹಾಸಿಕ ಘಟನೆಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ವಿಧಾನಸೌಧದಲ್ಲಿ ವಿಶ್ವಾಸ ಮತ ಯಾಚನೆಗೆ ಒಪ್ಪಿಕೊಂಡು ನಂತರ ಅಸಮರ್ಥರಾಗಿ ಪಲಾಯನ ಮಾಡಿದರು. ಇದು ಸಂವಿಧಾನ, ಪ್ರಜಾಪ್ರಭುತ್ವ, ಕಾನೂನಿನ ವಿಜಯವಾಗಿದೆ ಎಂದರು.
ಬಿಜೆಪಿಯ ಯಡಿಯೂರಪ್ಪನವರು ವಿಶ್ವಾಸ ಮತ ಮಂಡಿಸಲು ಒಂದು ವಾರ ಸಮಯ ಕೇಳಿದ್ದರು. ಆದರೆ ರಾಜ್ಯಪಾಲರು ಕೊಟ್ಟಿದ್ದು 15 ದಿನ. ಇದು ರಾಜ್ಯಪಾಲರು ಬಿಜೆಪಿ ನಾಯಕರ ಜೊತೆ ಶಾಮೀಲು ಆಗಿದ್ದಾರೆ ಎಂಬುದನ್ನು ತಿಳಿಸುತ್ತದೆ. ಬಿಜೆಪಿಯ ಎಲ್ಲ ಬೆಳವಣಿಗೆಗಳ ಹಿಂದೆ ಪ್ರಧಾನಿ ಮೋದಿ ಇದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಧನ್ಯವಾದಗಳು. ಬಿಜೆಪಿಯ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಅವರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಕೋಮುವಾದಿ ಸರ್ಕಾರಕ್ಕೆ ನಮ್ಮ ಜನರು ಅವಕಾಶ ಕೊಟ್ಟಿಲ್ಲ ಎಂದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಮೋದಿ ಒಬ್ಬ ಹಿಟ್ಟಲ್ ಎಂದು ಕಿಡಿಕಾರಿದರು. ಮೋದಿ ಮತ್ತು ಅಮಿತ್ ಶಾ ಬಾರೀ ಅಪಪ್ರಚಾರ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಅಭಿವೃದ್ಧಿ ಪರ ಮಾತು ಆಡದ ನಾಯಕರು, ಕೇಂದ್ರದಲ್ಲಿ ನಮ್ಮ ಸರ್ಕಾರ, ರಾಜ್ಯಪಾಲರು ನಮ್ಮವರು ಇದ್ದಾರೆ. ನಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂದರೆ ಅದು ತಪ್ಪು ಕಲ್ಪನೆ ಎಂದರು.