
ಹವಾನಾ: ಮೇ-19: ಹವಾನಾದ ಜೋಸ್ ಮಾರ್ಟಿ ವಿಮಾನ ನಿಲ್ದಾಣದಿಂದ ತೆರಳಿದ್ದ ಬೋಯಿಂಗ್ 737 ಕ್ಯುಬಾನಾ ಡೆ ಎವಿಯೇಷನ್ ವಿಮಾನ ಪತನವಾಗಿದ್ದು, ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬೋಯಿಂಗ್ 737 ವಿಮಾನ ಹವಾನ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಮೆಕ್ಸಿಕನ್ ಪ್ರಯಾಣಿಕರಿದ್ದರು ಎಂದು ಮೆಕ್ಸಿಕೊ ಸರ್ಕಾರ ಹೇಳಿದೆ.
ಅಪಘಾತಕ್ಕೀಡಾದ ವಿಮಾನದ ಅವಶೇಷಗಳಡಿಯಿಂದ ಬದುಕುಳಿದಿದ್ದ ಮೂವರು ಪ್ರಯಾಣಿಕರನ್ನು ಹೊರತೆಗೆಯಲಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಬದುಕುಳಿದವರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸುಮಾರು 40 ವರ್ಷಗಳಷ್ಟು ಹಳೆಯ ಕ್ಯೂಬನಾ ಡಿ ಅವಿಯಸಿಯೊನ್ ಕಾರ್ಯನಿರ್ವಹಿಸುತ್ತಿದ್ದ ವಿಮಾನ ಬೋಯಿಂಗ್ 737 ಆಗಿತ್ತು. ಹವಾನಾದ ಜೊಸ್ ಮಾರ್ತಿ ವಿಮಾನ ನಿಲ್ದಾಣದ ಅರಣ್ಯ ಪ್ರದೇಶದ ಹತ್ತಿರವಿರುವ ಮೈದಾನಕ್ಕೆ ಹೋಗಿ ಢಿಕ್ಕಿಯಾಗಿ ಬಿದ್ದಿದೆ. ವಿಮಾನ ಪತನವಾಗುತ್ತಿದ್ದಂತೆ ದಟ್ಟ ಹೊಗೆ ಎದ್ದಿತು.
ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಅದರಲ್ಲಿ 104 ಪ್ರಯಾಣಿಕರಿದ್ದರು. ಸ್ಥಳಕ್ಕೆ ಧಾವಿಸಿದ ಕ್ಯೂಬಾ ಅಧ್ಯಕ್ಷ ಮಿಗ್ವೆಲ್ ಡಿಯಾಜ್ ಕೇನಲ್ ಅಧಿಕ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.