ನವದೆಹಲಿ:ಮೇ-19: ಬಿಎಸ್ ಯಡಿಯೂರಪ್ಪ ಅವರು ವಿಶ್ವಾಸ ಮತಯಾಚನೆ ಮಾಡದೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಕೇವಲ 3 ದಿನದಲ್ಲಿ ಸರ್ಕಾರ ಬಿದ್ದು ಹೋಗಿದೆ. ಬಿಜೆಪಿಗೆ ಕರ್ನಾಟಕ ಜನತೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯವರು ಪ್ರಜಾಪ್ರಭುತ್ವ ಗೌರವವನ್ನು ಕಳೆಯಲು ಯತ್ನಿಸಿದ್ದರು. ಆದರೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವಕ್ಕೆ ಗೆಲುವು ಸಿಕ್ಕಿದೆ. ಅಧಿಕಾರ, ಹಣವೇ ಎಲ್ಲವೂ ಅಲ್ಲ ಎಂಬುದು ಸಾಬೀತಾಗಿದೆ. ಇನ್ನು ಮುಂದಾದರು ಬಿಜೆಪಿ ಆರ್ ಎಸ್ ಎಸ್ ಬುದ್ದಿ ಕಲಿತುಕೊಳ್ಳಬೇಕಿದೆ ಎಂದರು.
ಬಿಜೆಪಿಯವರಿಂದ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಯತ್ನಿಸಿದ್ದರು. ಇದಕ್ಕೆ ಪ್ರಧಾನಿ ಮೋದಿ ಉತ್ತೇಜನ ನೀಡಿದ್ದರು. ಆದರೆ ವಿಪಕ್ಷದವರೆಲ್ಲಾ ಸೇರಿ ಒಟ್ಟಾಗಿ ಪ್ರಧಾನಿ ಮೋದಿ ಅವರನ್ನು ಎದುರಿಸಿದ್ದೇವೆ. ಜನತೆಯ ದನಿಯನ್ನು ನಾವು ಕಾಪಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳಿಗಿಂತ ಪ್ರಧಾನಿ ನರೇಂದ್ರ ಮೋದಿ ದೊಡ್ಡವರಲ್ಲ. ಸಾಂವಿಧಾನಿಕ ಸಂಸ್ಥಗಳ ಶಕ್ತಿ ಕುಂದಿಸಲು ಬಿಜೆಪಿ ಯತ್ನಿಸಿತ್ತು. ಆದರೆ ಇದಕ್ಕೆ ಬಿಜೆಪಿ ತಕ್ಕ ಬೆಲೆ ತೆತ್ತಿದೆ ಎಂದರು.
ಇನ್ನು ಸದನದಲ್ಲಿ ಮಾತನಾಡಿದ್ದ ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿ ರಾಷ್ಟ್ರಗೀತೆ ಮೊಳಗುವುದಕ್ಕೂ ಮೊದಲೇ ಸದನದಿಂದ ಹೊರ ನಡೆದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.