ಹೊಸದಿಲ್ಲಿ,ಮೇ 18
ನಿನ್ನೆಯಷ್ಟೇ ದೇವರು, ರೈತರ ಹೆರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್ ಯಡಿಯೂರಪ್ಪ ಸರ್ಕಾರಕ್ಕೆ ನಾಳೆ ಅಗ್ನಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಿನ ಐದು ವರ್ಷ ಮುಂದುವರಿಯಲಿದೆಯೋ ಅಥವಾ ಮೂರು ದಿನಕ್ಕೇ ಉರುಳಲಿದೆಯೋ ಎಂಬುದನ್ನು ನಿರ್ಧರಿಸಲಿದೆ.
ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದ ರಾಜ್ಯಪಾಲರ ನಿಲುವನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಬಗ್ಗೆ ವಾದ, ಪ್ರತಿವಾದ ಆಲಿಸಿದ, ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ, ವಿಧಾನಸಭೆ ನಾಳೆ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಸೂಚನೆ ನೀಡಿದೆ. ಮಾತ್ರವಲ್ಲೇ ಬಹುಮತ ಸಾಬೀತಿಗೂ ಮುನ್ನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಯಾವುದೇ ಮಹತ್ವದ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದೂ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಇದಕ್ಕೂ ಮುನ್ನ ಎಲ್ಲಾ ಶಾಸಕರು ಪ್ರಮಾಣ ವಚನ ಸ್ವೀಕರಿಸಬೇಕು. ಎಲ್ಲ ಶಾಸಕರು ಸದನದಲ್ಲಿ ಹಾಜರಿರುವಂತೆ ಡಿಜಿಪಿ ನೋಡಿಕೊಳ್ಳಬೇಕು ಹಾಗೂ ಶಾಸಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಸದನದಲ್ಲಿ ಶಾಸಕರು ನಿರ್ಭೀತಿಯಿಂದ ಮತದಾನ ಮಾಡಲು ಅನುವು ಮಾಡಿಕೊಡಬೇಕು. ಈ ಬಗ್ಗೆ ಡಿಜಿಪಿಗೆ ಆದೇಶಿಸುತ್ತೇವೆ ಎಂದೂ ನ್ಯಾಯ ಪೀಠ ತಿಳಿಸಿದೆ.
ಇದಕ್ಕೂ ಮುನ್ನ ನಾಳೆಯೇ ವಿಶ್ವಾಸಮತ ಯಾಚನೆಗೆ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಒಂದೆರೆಡು ದಿನ ಕಾಲಾವಕಾಶ ನೀಡಿರುವ ಉದಾಹರಣೆ ಇದೆ. ಹೀಗಾಗಿ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಖಚಿತಪಡಿಸಿತು.
ಇದೇ ವೇಳೆ ಗೌಪ್ಯ ಮತದಾನಕ್ಕೆ ಅವಕಾಶಕೊಡಬೇಕು ಎಂದು ಬಿಜೆಪಿ ಮಾಡಿದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿತು. ಮಾತ್ರವಲ್ಲದೇ ಈ ಬಗ್ಗೆ ಹಂಗಾಮಿ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮತಯಾಚನೆಗೂ ಮುನ್ನ ಎಲ್ಲಾ ಶಾಸಕರು ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಆದೇಶ ನೀಡಿದೆ.
ಇನ್ನು ಕಾಂಗ್ರೆಸ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಜೆಡಿಎಸ್ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.