ಕಾವೇರಿ ನಿರ್ವಹಣಾ ಯೋಜನೆ ಕರಡನ್ನು ಅಂತಿಮಗೊಳಿಸುವ ಕುರಿತ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಕಾದಿರಿಸಿದೆ:

ನವದೆಹಲಿ, ಮೇ 17-ಕಾವೇರಿ ನಿರ್ವಹಣಾ ಯೋಜನೆ ಕರಡನ್ನು ಅಂತಿಮಗೊಳಿಸುವ ಕುರಿತ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಕಾದಿರಿಸಿದೆ.
ಕೇಂದ್ರ ಸರ್ಕಾರ ಸಲ್ಲಿಸಿದ್ದ ಮಾರ್ಪಡಿತ ಯೋಜನೆ ಕರಡು ಪರಾಮರ್ಶಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಈ ವಿಚಾರದಲ್ಲಿ ತನ್ನ ಅಂತಿಮ ತೀರ್ಮಾನ ಕಾದಿರಿಸಿತು.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಈ ನಾಲ್ಕು ರಾಜ್ಯಗಳ ಸಲಹೆ ಮತ್ತು ಅಭಿಪ್ರಾಯಗಳನ್ನು ತಾನು ಪರಿಗಣಿಸಬೇಕಿದೆ ಎಂದು ಪೀಠ ಹೇಳಿದೆ.
ಇದಕ್ಕೂ ಮುನ್ನ ಕರ್ನಾಟಕದ ಪರ ವಾದ ಮಂಡಿಸಿದ ವಕೀಲರು ವಾಡಿಕೆ ಮಳೆಯಾದಾಗ ನಮ್ಮ ಇಚ್ಛೆಯಂತೆ ನೀರು ಬಳಸಿಕೊಳ್ಳಲು ಅವಕಾಶ ನೀಡಬೇಕು ಹಾಗೂ ನಮ್ಮಲ್ಲಿನ ಕ್ಯಾರಿ ಓವರ್‍ಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಪ್ರಕಟಗೊಂಡು ಹೊಸ ಸರ್ಕಾರ ರಚನೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕಾವೇರಿ ಸ್ಕೀಂ ಕರಡನ್ನು ಅಂತಿಮಗೊಳಿಸುವುದಕ್ಕೆ ತಡೆ ನೀಡಬೇಕೆಂದು ಕರ್ನಾಟಕ ಸರ್ವೋಚ್ಛ ನ್ಯಾಯಾಲಯವನ್ನು ನಿನ್ನೆ ಕೋರಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಪೀಠ ರಾಜ್ಯದ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೇ, ನಾಲ್ಕು ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆ ಕುರಿತು ಆಗ್ಗಿಂದಾಗ್ಗೆ (ಕಾಲ ಕಾಲಕ್ಕೆ) ನಿರ್ದೇಶನಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಕಾವೇರಿ ನಿರ್ವಹಣಾ ಯೋಜನೆ ಕರಡಿನ ನಿಬಂಧನೆಯನ್ನು ಮಾರ್ಪಾಡು ಮಾಡುವಂತೆಯೂ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚಿಸಿತು.
ಈ ನಿಬಂಧನೆಯನ್ನು ಮಾರ್ಪಾಡು ಮಾಡಬೇಕು ಹಾಗೂ ಅನುಮೋದನೆಗಾಗಿ ಅದನ್ನು ನಾಳೆ ಸಲ್ಲಿಸಬೇಕೆಂದು ಪೀಠವು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಸೂಚನೆ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ