
ಬೆಂಗಳೂರು, ಮೇ 17- ನಮ್ಮ ಶಾಸಕರನ್ನು ಮುಟ್ಟಲಿ ನಾವು ನೋಡುತ್ತೇವೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.
ರಾಜ್ಯಪಾಲರ ಕ್ರಮ ಖಂಡಿಸಿ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಹುಮತ ಸಾಬೀತುಪಡಿಸಲು ಸಾಧ್ಯವೇ ಇಲ್ಲ. ರಾಜಕಾರಣ ನಮಗೂ ಗೊತ್ತಿದೆ. ನಮ್ಮ ಶಾಸಕರನ್ನು ಮುಟ್ಟಿದರೆ ನಾವು ತಕ್ಕ ಪ್ರತ್ಯುತ್ತರ ಕೊಡಬೇಕಾಗುತ್ತದೆ ಎಂದು ಅವರದ್ದೇ ಶೈಲಿಯಲ್ಲಿ ಹೇಳಿದರು.
ಹಲವು ಕಾಂಗ್ರೆಸ್ ಶಾಸಕರು ಜನಾರ್ಧನರೆಡ್ಡಿ, ಶ್ರೀರಾಮುಲು ಸಂಪರ್ಕದಲ್ಲಿದ್ದಾರೆ ಎನ್ನುತ್ತಿದ್ದಾರೆ. ಅವರು ನಮ್ಮ ಶಾಸಕರನ್ನು ಮುಟ್ಟಿದರೆ ನಾವೂ ಕೂಡ ನಮ್ಮದೇ ಶೈಲಿಯ ರಾಜಕಾರಣ ಮಾಡಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ರಾಜ್ಯಪಾಲ ವಿ.ಆರ್.ವಾಲಾ ಅವರ ನಡೆ ಅಸಂವಿಧಾನಿಕವಾಗಿದೆ. ಕೇಂದ್ರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.