ಬೆಂಗಳೂರು:ಮೇ-೧೭: ಚುನಾವಣಾ ಪೂರ್ವದಲ್ಲಿ ನಾನು ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದೇನೆ. ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಎರಡು ದಿನದಲ್ಲಿ ಘೋಷಿಸುವುದಾಗಿ ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನೂತನ ಮುಖ್ಯಮಂಯ್ತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧಹಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಗಳ, ನೇಕಾರರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದೇವೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸಿದ್ದೇನೆ, ನಾಳೆ ಈ ಸಂಬಂಧ ದಾಖಲೆ ಪರಿಶೀಲಿಸಿ 2 ದಿನದೊಳಗೆ ನಿರ್ಧಾರ ಘೋಷಿಸುವುದಾಗಿ ತಿಳಿಸಿದರು.
ನಾನು ರಾಜ್ಯದ ಆರೂವರೆ ಕೋಟಿ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ಖಂಡಿತಾ ಉಳಿಸಿಕೊಳ್ಳುತ್ತೇನೆ ಎಂದರು.
ಇದೇವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್-ಜೆಡಿಎಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ನಮ್ಮಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಹುನ್ನಾರ ನಡೆಸಿದ್ದಾರೆ. ಆದರೆ ಅವರ ಈ ಹುನ್ನಾರ ನಡೆಯದು ಎಂದರು.
ವಿಶ್ವಾಸ ಮತದಲ್ಲಿ ನಾನು ಖಂಡಿತಾ ಜಯಶೀಲನಾಗುತ್ತೇನೆ ಎಂಬ ಭರವಸೆ ಇದೆ. ಅಂತೆಯೇ ರಾಜ್ಯದ ಜನತೆ, ಬಿಜೆಪಿ ಪಕ್ಷ ಮತ್ತು ಶಾಸಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ರಾಜ್ಯಪಾಲರು ಸೂಚಿಸಿರುವಂತೆ 15 ದಿನಗಳು ಅಲ್ಲ ಅದಕ್ಕಿಂತ ಮುಂಚಿತವಾಗಿಯೇ ವಿಶೇಷ ಅಧಿವೇಷನ ಕರೆದು ವಿಶ್ವಾಸ ಮತ ಯಾಚಿಸಲಿದ್ದೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಇದಕ್ಕೂ ಮುನ್ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ಯಡಿಯೂರಪ್ಪ, ಮೆಟ್ಟಿಲುಗಳಿಗೆ ನಮಸ್ಕರಿಸಿ ವಿಧಾನಸೌಧ ಪ್ರವೇಶಿಸಿದರು. ಈ ವೇಳೆ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಯ ನಾಯಕರು ಉಪಸ್ಥಿತರಿದ್ದರು.
ವಿಧಾನಸೌಧಕ್ಕೆ ಆಗಮಿಸಿದ ನೂತನ ಮುಖ್ಯಮಂತ್ರಿಗಳಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹಾಗೂ ವಿಜಯ್ ಭಾಸ್ಕರ್ ಅವರು ಸ್ವಾಗತ ಕೋರಿದರು.