
ಬೆಂಗಳೂರು:ಮೇ-17: ತೀವ್ರ ವಿರೋಧಗಳ ನಡುವೆ, ಸಾಕಷ್ಟು ರಾಜಕೀಯ ಹಗ್ಗಜಗ್ಗಾಟದ ಬಳಿಕ ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಮುಖ್ಮಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕಾರ ಮಾಡಿದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ವಿಧಾನಸಭೆ ಅತಂತ್ರ ವಿಚಾರ ಪ್ರಸ್ತುತ ನ್ಯಾಯಾಲಯದ ಅಂಗಳದಲ್ಲಿದೆ. ಆದರೂ ಬಿಜೆಪಿ ಸಂವಿಧಾನದ ವಿರುದ್ಧ ನಡೆಯುತ್ತಿದೆ. ಬಿಜೆಪಿಯ ಈ ಅಸಂವಿಧಾನಿಕ ನಡೆಯ ಕುರಿತು ಜನರ ಬಳಿ ಹೋಗಿ ವಿವರಿಸುತ್ತೇವೆಂದು ಹೇಳಿದ್ದಾರೆ.
ಈ ನಡುವೆ ಆಪರೇಷನ್ ಕಮಲದ ಭೀತಿಯಿಂದಾಗಿ ಶಾಸಕರನ್ನು ಬಿಡದಿ ಬಳಿಯಿರುವ ಈಗಲ್ ಟನ್ ರೆಸಾರ್ಟ್’ನಲ್ಲಿ ಬಚ್ಚಿಟ್ಟಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಇದೀಗ ಹೊರಗೆ ಕರೆತಂದಿದ್ದು, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ನಗರದ ಗಾಂಧಿ ಪ್ರತಿಮೆ ಬಳಿ ಭಾರೀ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಇದೀಗ ಮುಂದಾಗಿವೆ.
ಪ್ರತಿಭಟನೆಯಲ್ಲಿ ಜಿಎನ್. ಆಜಾದ್, ಅಶೋಕ್ ಗೆಲ್ಹೋಟ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್’ನ ವಿವಿಧ ನಾಯಕರು ಪಾಲ್ಗೊಳ್ಳಲಿದ್ದಾರೆ.