ವಾರಣಾಸಿ:ಮೇ-16; ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದ ಪರಿಣಾಮ 18 ಮಂದಿ ಮೃತಪಟ್ಟಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ವಾರಣಾಸಿಯ ಕ್ಯಾಂಟ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನೆ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೇಸರ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ಸಿದ್ಧಾರ್ಥನಾಥ್ ಸಿಂಗ್ ಅವರು ಹೇಳಿದ್ದಾರೆ.
ನಗರದ ಮುಖ್ಯ ರೈಲ್ವೆ ನಿಲ್ದಾಣ ಮತ್ತು ಅಂತರಾಜ್ಯ ಬಸ್ ನಿಲ್ದಾಣದ ಎದುರುಗಡೆ ನಿರ್ಮಿಸುತ್ತಿದ್ದ ಫ್ಲೈಓವರ್ ಇಂದು ಏಕಾಏಕಿ ಕುಸಿದು ಬಿದ್ದಿದೆ. ಮೇಲ್ಸುತುವೆ ಕುಸಿತ ಪ್ರದೇಶದಿಂದ ಈಗಾಗಲೇ 18 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಪರಿಹಾರ ಆಯುಕ್ತ ಸಂಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅನೇಕ ಮಂದಿ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಅವಶೇಷಗಳ ತೆರವು ಕಾರ್ಯಾಚರಣೆ ಸೇತುವೆ ಕುಸಿದ ರಭಸಕ್ಕೆ ಬಸ್ ಸೇರಿದಂತೆ ಕೆಲ ವಾಹನಗಳು ನಜ್ಜು ಗುಜ್ಜಾಗಿವೆ. ಮೂವರನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಹೇಳಿದ್ದಾರೆ.
2261 ಮೀಟರ್ ಉದ್ದದ ಮೇಲ್ಸುತುವೆ ಇದಾಗಿದ್ದು, ಸುಮಾರು 129 ಕೋಟಿ ವೆಚ್ಚದಲ್ಲಿ ಉತ್ತರ ಪ್ರದೇಶ ಮೇಲ್ಸುತುವೆ ಕಾಮಗಾರಿ ನಿಗಮದಿಂದ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು, ಮೇಲ್ಸುತುವೆ ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ಮಧ್ಯೆ ದೇಶದಲ್ಲಿಯೇ ಅತಿ ಹೆಚ್ಚಿನ ಪ್ರಾಧಾನ್ಯತೆ ಹೊಂದಿರುವ ಪ್ರಧಾನಿ ಅವರ ಸ್ವಕ್ಷೇತ್ರದಲ್ಲಿಯೇ ಇಂತಹ ದುರಂತ ನಡೆದಿರುವುದಕ್ಕೆ ಪ್ರತಿಪಕ್ಷಗಳು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ಈ ದುರಂತ ಕುರಿತ ತನಿಖೆಗಾಗಿ ಮೂವರು ಸದಸ್ಯರನ್ನೊಳಗೊಂಡ ತಂಡವನ್ನು ಯೋಗಿ ಆದಿತ್ಯನಾಥ್ ರಚಿಸಿದ್ದು, ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡಿರುವವರಿಗೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
Uttara pradesh,Varanasi flyover collapse,18 dead