ಸ್ಪೀಕರ್ ಕೋಳಿವಾಡ ವಾಗ್ದಾಳಿ

 

ಬೆಂಗಳೂರು, ಮೇ 16- ಕಾಂಗ್ರೆಸ್‍ನ ಈ ಸ್ಥಿತಿಗೆ ಸಿದ್ದರಾಮಯ್ಯ ಅವರ ಸರ್ವಾಧಿಕಾರಿ ಧೋರಣೆ ಕಾರಣ ಎಂದು ಸ್ಪೀಕರ್ ಕೋಳಿವಾಡ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಪಕ್ಷದ ಬಗ್ಗೆ ಅಭಿಮಾನವಿಲ್ಲ. ಅವರ ರಕ್ತ ಕಾಂಗ್ರೆಸ್‍ನದೂ ಅಲ್ಲ ಎಂದ ಅವರು, ನಾನು ಅಪ್ಪಟ ಕಾಂಗ್ರೆಸಿಗ. ಕಾಂಗ್ರೆಸ್‍ನ ಪರಿಸ್ಥಿತಿಯನ್ನು ಆತ್ಮಾವಲೋಕನ ಮಾಡಬೇಕು ಎಂದು ಹೇಳಿದರು.

ನಾನು ಸ್ಪೀಕರ್ ಆದರೂ ಮೂಲ ಕಾಂಗ್ರೆಸ್ ತತ್ವಕ್ಕೆ ಬದ್ಧನಾಗಿದ್ದೇನೆ. ಆದರೆ ಸಿದ್ದರಾಮಯ್ಯ ಪಕ್ಷ ಮತ್ತು ಹೈಕಮಾಂಡ್ ಅನ್ನು ದುರುಪಯೋಗಪಡಿಸಿಕೊಂಡರು. ನನ್ನ ಹಾಗೂ ಇನಾಂದಾರ್ ಅವರನ್ನು ಸೋಲಿಸಲು ಕಳೆದ ಬಾರಿ ಯತ್ನಿಸಲಾಗಿತ್ತು. ನನ್ನ ಸೋಲಿಗೂ ಸಿದ್ದರಾಮಯ್ಯ ಕಾರಣ ಎಂದು ಹರಿಹಾಯ್ದರು.

ನನ್ನ ಕ್ಷೇತ್ರಕ್ಕೆ ಅವರು ಬರಲಿಲ್ಲ. ಈ ಹಿಂದೆ ಜೆಡಿಎಸ್‍ಗೂ ಮೋಸ ಮಾಡಿದ್ದರು. ನನ್ನಿಂದಲೇ ಪಕ್ಷ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಈ ಹಿಂದೆ ಪರಮೇಶ್ವರ್ ಅವರ ಸೋಲಿಗೂ ಸಿದ್ದರಾಮಯ್ಯ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೋಲು, ಗೆಲುವು ಮುಖ್ಯವಲ್ಲ. ಪಕ್ಷ ಮುಖ್ಯ. ಸಿದ್ದರಾಮಯ್ಯರಿಂದ ಕಾಂಗ್ರೆಸ್‍ಗೆ ಉಳಿಗಾಲವಿಲ್ಲ. ಅವರಿಗೆ ಯಾವುದೇ ಸ್ಥಾನ ಕೊಡಬಾರದು. ಮುಖ್ಯಮಂತ್ರಿಯಾದಾಗ ಅಧಿಕಾರ, ಹಣದ ದರ್ಪ ತೋರಿದರು. ಖೇಣಿಯಂತವರಿಗೆ ಟಿಕೆಟ್ ನೀಡಿದರು.

ಖರ್ಗೆ, ವೀರಪ್ಪ ಮೊಯ್ಲಿ ಅಂತಹವರನ್ನು ಕಡೆಗಣಿಸಲಾಯಿತು ಎಂದು ನುಡಿದ ಅವರು, ಕುಮಾರಸ್ವಾಮಿ ಅವರ ಅಪ್ಪನಾಣೆಗೂ ಸಿದ್ದರಾಮಯ್ಯ ಅವರನ್ನು ಸಿಎಂ ಆಗಲು ಬಿಡುವುದಿಲ್ಲ. ಇಂದು ಶಂಕರ್ ಗೆಲುವಿಗೆ ಸಿದ್ದರಾಮಯ್ಯ ಕಾರಣ. ಲೋಕಸಭಾ ಚುನಾವಣೆ ಇವರ ನೇತೃತ್ವದಲ್ಲಿ ನಡೆಯಬಾರದು. ಪಕ್ಷ ಉಳಿಯಬೇಕೆಂದರೆ ಇವರಿಗೆ ಯಾವುದೇ ಅಧಿಕಾರ ನೀಡಬೇಡಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ