ಬೆಂಗಳೂರು,ಮೇ16- ಹಾವೇರಿ ಜಿಲ್ಲೆ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಕೆಪಿಜೆಪಿ ಪಕ್ಷದ ಶಾಸಕ ಆರ್.ಶಂಕರ್ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಸರ್ಕಾರ ರಚನೆಯಲ್ಲಿ ಒಂದೊಂದು ಸ್ಥಾನವೂ ಮುಖ್ಯವಾಗಿರುವುದರಿಂದ ಆರ್.ಶಂಕರ್ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿರುವುದು ಕಮಲದ ಆಸೆಗೆ ಇನ್ನಷ್ಟು ಜೀವ ತಂದಿದೆ.
ಇಂದು ಬೆಳಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಶಂಕರ್ ತಾವು ಯಾವುದೇ ಷರತ್ತಿಲ್ಲದೆ ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.
ಶಂಕರ್ ಬಿಜೆಪಿಗೆ ಬೆಂಬಲ ನೀಡುವುದರಲ್ಲಿ ಪಕ್ಷದ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪನವರ ಪಾತ್ರ ಪ್ರಮುಖವಾಗಿದೆ ಎನ್ನಲಾಗುತ್ತಿದೆ.
ನಿನ್ನೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದೂರವಾಣಿ ಮೂಲಕ ಶಂಕರ್ ಅವರನ್ನು ಸಂಪರ್ಕಿಸಿದ ಈಶ್ವರಪ್ಪ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು. ಅಲ್ಲದೆ ಖುದ್ದು ರಾಣಿಬೆನ್ನೂರಿಗೆ ಅವರ ಪುತ್ರ ಕಾಂತೇಶ್ ಅವರನ್ನು ಕಳುಹಿಸಿಕೊಟ್ಟು ಮಾತುಕತೆ ನಡೆಸುವಂತೆ ಸೂಚಿಸಿದರು.
ಇದರಂತೆ ಇಂದು ಬೆಳಗ್ಗೆ ಶಂಕರ್ ಬೆಂಗಳೂರಿಗೆ ಬರುತ್ತಿದ್ದಂತೆ ಅವರನ್ನು ಈಶ್ವರಪ್ಪ ನೇರವಾಗಿ ಬಿಎಸ್ವೈ ಮನೆಗೆ ಕರೆದೊಯ್ದರು.