
ಪ್ಯಾರಿಸ್, ಮೇ 16-ಲೈಂಗಿಕ ಮತ್ತು ಹಿಂಸಾಚಾರ ದೃಶ್ಯಗಳು, ಭಯೋತ್ಪಾದನೆ ಪರ ಪ್ರಚಾರ ಹಾಗೂ ಜನಾಂಗೀಯ ದ್ವೇಷ ಭಾಷಣಗಳ ವಿರುದ್ಧ ಚಾಟಿ ಬೀಸಿರುವ ಫೇಸ್ಬುಕ್ ಈ ವರ್ಷದ ಮೊದಲ ಮೂರು ತಿಂಗಳಿನಲ್ಲಿ 583 ದಶಲಕ್ಷ ನಕಲಿ ಎಫ್ಬಿ ಖಾತೆಗಳಿಗೆ ಕತ್ತರಿ ಹಾಕಿದೆ.
ಕೇಂಬ್ರಿಡ್ಜ್ ಅನಾಲಿಟಿಕಾ ಡೇಟಾ ಹಗರಣದ ನಂತರ ಎಚ್ಚೆತ್ತಿರುವ ಫೇಸ್ಬುಕ್ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. ನಕಲಿ ಖಾತೆಗಳ ಮೂಲಕ ಲೈಂಗಿಕ ಮತ್ತು ಹಿಂಸಾಚಾರ ದೃಶ್ಯಗಳು, ಭಯೋತ್ಪಾದನೆ ಪರ ಪ್ರಚಾರ ಹಾಗೂ ಜನಾಂಗೀಯ ದ್ವೇಷ ಭಾಷಣಗಳನ್ನು ಬಿತ್ತರಿಸಿ ಸಮಾಜದ ಸ್ವಾಸ್ಥ್ಯ ಹಾಳುಗೇಡವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಫ್ಬಿ ಹೇಳಿದೆ.
2018ರ ಮೊದಲ ಮೂರು ತಿಂಗಳ ಅವಧಿಯಲ್ಲಿ 583 ದಶಲಕ್ಷ ನಕಲಿ ಎಫ್ಬಿ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ಸಂಸ್ಥೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.