ಬೆಂಗಳೂರು,ಮೇ16-ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರಕ್ಕೆ ರಾಷ್ಟ್ರಪತಿಗಳಾಗಲಿ, ರಾಜ್ಯಪಾಲರಾಗಲಿ, ಅವಕಾಶ ಮಾಡಿಕೊಡಬಾರದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಕುದುರೆ ವ್ಯಾಪಾರಕ್ಕೆ ಪ್ರೋತ್ಸಾಹ ಕೊಡಲಾಗುತ್ತದೆಯೋ ಅಥವಾ ಸಾಂವಿಧಾನಿಕ ವ್ಯವಸ್ಥೆಯನ್ನು ಉಳಿಸಲಾಗುತ್ತದೆಯೋ ಎಂಬ ಬಗ್ಗೆ ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಕೋರಿದರು.
ಜೆಡಿಎಸ್ ಪಕ್ಷದ ಶಾಸಕಾಂಗ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರಿಗೆ ಬಿಜೆಪಿ ನಾಯಕರು 100 ಕೋಟಿ ರೂ. ಹಾಗೂ ಸಂಪುಟ ದರ್ಜೆ ಕೊಡುವ ಆಹ್ವಾನ ಕೊಟ್ಟಿದ್ದಾರೆ. ಇದು ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಿದ್ದು, ರಾಷ್ಟ್ರಪತಿಗಳು ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಭ್ರಷ್ಟ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿ ಆಮಿಷವೊಡ್ಡುವ ಹಣ ಕಪ್ಪು ಹಣವೋ, ವೈಟ್ ಹಣವೋ, ಇದು ಬಿಜೆಪಿ ಖಜಾನೆಯಲ್ಲಿದೆಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಲ್ಲಿದ್ದಾರೆ, ಸ್ವಾತಂತ್ರ್ಯ ಬಂದ ನಂತರ ಇದುವರೆಗೆ ಸಾಂವಿಧಾನಿಕ ಸಂಸ್ಥೆಗಳನ್ನು ಇಷ್ಟರ ಮಟ್ಟಿಗೆ ಯಾರೂ ದುರ್ಬಳಕೆ ಮಾಡಿಕೊಂಡಿರಲಿಲ್ಲ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಆಪರೇಷನ್ ಕಮಲಕ್ಕೆ ಕೈ ಹಾಕಿರುವ ಬಿಜೆಪಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಸರಳ ಬಹುಮತಕ್ಕೆ 9 ಶಾಸಕರ ಕೊರತೆ ಇದ್ದರೂ ಬಿಜೆಪಿ ಯಾವ ರೀತಿ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎಷ್ಟರಮಟ್ಟಿಗೆ ರಕ್ಷಿಸುತ್ತಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರ ಸಂಖ್ಯೆ 116ರ ಗಡಿಯಲ್ಲಿದ್ದು, ಸರಳ ಬಹುಮತಕ್ಕೆ ನಾಲ್ಕು ಶಾಸಕರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು, ನಾಯಕರು ಹಾಗೂ ನಾವು ರಾಜ್ಯಪಾಲರಿಗೆ ಮನವಿ ಕೂಡ ಮಾಡಿದ್ದೇವೆ. ಮೇಘಾಲಯ, ಗೋವಾ, ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿದ್ದರೂ ಬಿಜೆಪಿ ಮೈತ್ರಿಕೂಟ ಸರ್ಕಾರಕ್ಕೆ ಅಲ್ಲಿನ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ 9 ಶಾಸಕರ ಕೊರತೆಯಿದೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ಹೇಳಿದರು.
ಅಧಿಕಾರಕ್ಕಾಗಿ ಆತುರ ಪಡುತ್ತಿಲ್ಲ. ಈಗಾಗಲೇ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಸಾಬೀತುಪಡಿಸಿದ್ದೇನೆ. ಈಗ ಕಾಂಗ್ರೆಸ್ ಬೆಂಬಲಿತ ಸಿಎಂ ಆದರೂ ನಾಡಿನ ಜನತೆಯ ಆಶೀರ್ವಾದದ ಮುಖ್ಯಮಂತ್ರಿ ಅಲ್ಲ ಎಂಬ ನೋವಿದೆ. ನಾವು ಅಧಿಕಾರಕ್ಕಾಗಿ ಹುಡುಕಿಕೊಂಡು ಹೋದವರಲ್ಲ. ರಾಜ್ಯ, ದೇಶದ ಉಳಿವಿಗಾಗಿ ಮಾಡಬೇಕಾಗಿದೆ. ಈ ಪರಿಸ್ಥಿತಿಯಲ್ಲಿ ನನ್ನ ಕಲ್ಪನೆ ಹಾಗೂ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ ಯೇ ಎಂಬ ಅನುಮಾನವಿದೆ.
ನಾಡಿನ ಜನತೆ ರಾಜ್ಯದ ಅಭಿವೃದ್ಧಿಗೆ ಉತ್ತಮ ನಿರ್ಧಾರ ಮಾಡಿಲ್ಲ ಎಂಬ ಕೊರಗು ಇದೆ. ಅತಂತ್ರ ಪರಿಸ್ಥಿತಿ ಬರಲು ನಮ್ಮ ಪಕ್ಷದ ನಡವಳಿಕೆಗಳ ಬಗ್ಗೆ ಕೃತಕ ವಿಷಯಗಳನ್ನು ಸೃಷ್ಟಿ ಮಾಡಲಾಯಿತು. ಆ ರೀತಿ ಮಾಡಿದವರಿಗೆ ಈಗ ಪಶ್ಚಾತ್ತಾಪವೂ ಆಗಿರಬಹುದು.
ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನಿಂದ ಬಿಜೆಪಿಗೆ 104 ಸ್ಥಾನ ಬಂದಿಲ್ಲ. ಕೆಲವು ವರ್ಗದವರ ತಪ್ಪು ನಿರ್ಧಾರದಿಂದಾಗಿ ಜಾತ್ಯತೀತ ಮತ ವಿಭಜನೆಯಾಗಿ ಈ ಫಲಿತಾಂಶ ಬಂದಿದೆ. ಕೆಲವರು ಜೆಡಿಎಸ್ನ್ನು ಮುಗಿಸಲು ಹೋಗಿ ಈ ಫಲಿತಾಂಶ ಬಂದಿದೆ. ಇಲ್ಲದಿದ್ದರೆ ಬಿಜೆಪಿ 80ರ ಗಡಿಯನ್ನು ದಾಟುತ್ತಿರಲಿಲ್ಲ.
ದೇಶಕ್ಕೆ ಉಪದೇಶ ಮಾಡುವ ಪ್ರಧಾನಿಯವರು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬರುವುದಿಲ್ಲ ಎಂದು ಹೇಳಿದ್ದಾರೆ. ಇದು ಅಧಿಕಾರ ದುರ್ಬಳಕೆ ಮಾಡುವ ಉದ್ದೇಶವಲ್ಲವೇ ಎಂದು ಪ್ರಶ್ನಿಸಿದರು.