ಬೆಂಗಳೂರು,ಮೇ16- ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ನ ಶಾಸಕಾಂಗ ಸಭೆಗೆ 73 ಮಂದಿ ಹಾಜರಾಗಿ ಜೆಡಿಎಸ್ಗೆ ಬೆಂಬಲ ನೀಡಲು ಮತ್ತು ಜೆಡಿಎಸ್ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಬೆಂಬಲ ವ್ಯಕ್ತ ಪಡಿಸುವ ಪತ್ರಕ್ಕೆ ಸಹಿ ಹಾಕಿದ್ದಾರೆ.
ಒಬ್ಬ ಪಕ್ಷೇತರರ ಶಾಸಕ ಸೇರಿ ಒಟ್ಟು 78 ಮಂದಿ ಶಾಸಕರ ಸಂಖ್ಯಾಬಲ ಇರುವ ಕಾಂಗ್ರೆಸ್ನಲ್ಲಿ ಆರು ಮಂದಿ ಶಾಸಕರು ಶಾಸಕಾಂಗ ಸಭೆಗೆ ಗೈರು ಹಾಜರಾಗಿ ಕುತುಹಲ ಕೆರಳಿಸಿದರು. ಆದರೆ ಈ ಆರು ಮಂದಿ ಶಾಸಕರು ಕಾಂಗ್ರೆಸ್ನ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.
ಬೆಳಗಾವಿ ಜಿಲ್ಲೆಯ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟ್ಟಹಳ್ಳಿ, ಬಳ್ಳಾರಿ ಜಿಲ್ಲೆಯ ಆನಂದ್ಸಿಂಗ್, ಬಿ.ನಾಗೇಂದ್ರ, ಜೆ.ಎನ್.ಗಣೇಶ್ ಅವರು ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದರು. ರಾಜ್ಯದಲ್ಲಿ ಅತಂತ್ರದ ಫಲಿತಾಂಶದ ಹಿನ್ನೆಲೆಯಲ್ಲಿ ಸರ್ಕಾರ ರಚನೆಗಾಗಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಇವರ ಗೈರು ಹಾಜರಿ ಆತಂಕ ಮೂಡಿಸಿತ್ತು. ಆದರೆ ಡಿ.ಕೆ.ಶಿವಕುಮಾರ್ ಅವರ ಸಂಪರ್ಕಕ್ಕೆ ಬಂದಿರುವ ಈ ಶಾಸಕರು ನಿರಂತರ ಸಂಪರ್ಕವಿರಿಸಿಕೊಂಡಿದ್ದಾರೆ. ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬೆಂಬಲ ಪತ್ರಕ್ಕೆ ಸಹಿ ಮಾಡಿಕೊಡುವುದಾಗಿ ಆನಂದ್ ಸಿಂಗ್ ಮತ್ತು ನಾಗೇಂದ್ರ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದು ಸದಾ ಕಾಲ ಕಾಂಗ್ರೆಸ್ ಜೊತೆಯಲ್ಲಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ.