ಬೆಂಗಳೂರು, ಮೇ 16- ಬಿಜೆಪಿ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ರಾಜ್ಯಪಾಲ ವಿ.ಆರ್.ವಾಲಾ ಅವರು ಅನುಮತಿ ನೀಡಿ ವಿಶ್ವಾಸಮತ ಸಾಬೀತುಪಡಿಸಲು ಒಂದು ವಾರ ಕಾಲಾವಕಾಶ ನೀಡಿದ್ದಾರೆ ಎನ್ನಲಾಗಿದ್ದು, ನಾಳೆ ಮಧ್ಯಾಹ್ನ 12.20ಕ್ಕೆ ಸರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಶತಸಿದ್ಧ ಎಂದು ಕೇಸರಿ ಮೂಲಗಳು ಖಚಿತಪಡಿಸಿದ್ದರೂ,ಅಧಿಕೃತವಾಗಿಲ್ಲ.
ಇಂದು ಬೆಳಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ 104 ಶಾಸಕರ ಪಟ್ಟಿ ಮತ್ತು ಮುಂದೆ ವಿಶ್ವಾಸಮತ ಸಾಬೀತುಪಡಿಸುವ ಭರವಸೆಯನ್ನು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಣೆಬೆನ್ನೂರಿನಲ್ಲಿ ಕೆ.ಬಿ.ಕೋಳಿವಾಡ ವಿರುದ್ಧ ಕೆಪಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಆರ್.ಶಂಕರ್ ಅವರು ಈಗಾಗಲೇ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿರುವುದರಿಂದ ಬಿಜೆಪಿ ಸಂಖ್ಯಾಬಲ 105ಕ್ಕೆ ಏರಿಕೆಯಾಗಿದೆ.
ಈ ಮಧ್ಯೆ ಸರಳ ಬಹುಮತಕ್ಕೆ ಅಗತ್ಯವಿರುವ ಶಾಸಕರನ್ನು ಕ್ರೋಢೀಕರಿಸುವ ಕಾರ್ಯಕ್ಕೆ ಬಿಜೆಪಿ ಕೈ ಹಾಕಿದೆ ಎನ್ನಲಾಗಿದೆ.
ಕಾಂಗ್ರೆಸ್ನ ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಬಿ.ಕೆ.ಸಂಗಮೇಶ್, ವಿ.ಸಿ.ಪಾಟೀಲ್, ಶಿವಾನಂದ ಪಾಟೀಲ್, ಆನಂದ್ಸಿಂಗ್, ಗಣೇಶ್ ಹಾಗೂ ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್.ಪಿ.ನಾಗೇಶ್ ಅವರಿಗೆ ಬಿಜೆಪಿ ಗಾಳ ಹಾಕಿದ್ದು, ಈ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಗುವ ನಿರೀಕ್ಷೆಯಿದೆ ಎಂದು ಕೇಸರಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
ಈ ಮಧ್ಯೆ ಅಮರೇಗೌಡ ಬಯ್ಯಾಪುರ ಹಾಗೂ ವೆಂಕಟರಾವ್ ನಾಡಗೌಡ ಅವರು ಕೂಡ ಬಿಜೆಪಿ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಪಕ್ಷ ತೊರೆದು ಬರುವ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ನಡೆಯುವ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ವಿಶೇಷ ಪ್ಯಾಕೇಜ್ ನೀಡುವುದರ ಜತೆಗೆ ಎಲ್ಲ ಖರ್ಚು-ವೆಚ್ಚ ಭರಿಸಲು ಮತ್ತು ಗೆಲುವಿಗೆ ಸಹಕರಿಸಲು ಬಿಜೆಪಿ ಹೈಕಮಾಂಡ್ ಒಪ್ಪಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಸಂಪರ್ಕದಲ್ಲಿರುವ ಕಾಂಗ್ರೆಸ್ ಶಾಸಕರೊಂದಿಗೆ ಅಮಿತ್ ಷಾ, ರಾಜ್ಯ ಉಸ್ತುವಾರಿಗಳಾದ ಮುರಳೀಧರರಾವ್ ಮತ್ತು ಪ್ರಕಾಶ್ ಜಾವ್ಡೇಕರ್ ಅವರು ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
104 ಸ್ಥಾನಗಳನ್ನು ಪಡೆದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡದೆ ಕೇವಲ 38 ಸ್ಥಾನ ಪಡೆದಿರುವ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಮುಂದಾಗಿರುವ ಕಾಂಗ್ರೆಸಿಗರ ಧೋರಣೆಯಿಂದ ಬೇಸತ್ತಿರುವ ಕೆಲ ಶಾಸಕರು ಬಿಜೆಪಿಯೊಂದಿಗೆ ಕೈ ಜೋಡಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರನ್ನು ಭೇಟಿಯಾಗಿ ರಾಜಭವನದಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು ನಾಳೆ ಬಿಜೆಪಿ ಸರ್ಕಾರ ರಚನೆ ಖಚಿತ ಎಂದು ತಿಳಿಸಿರುವುದು ಕುತೂಹಲ ಕೆರಳಿಸಿದೆ.