ಬೆಂಗಳೂರು:ಮೇ:16: ರಾಜ್ಯದಲ್ಲಿ ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದರು ಕಾಂಗ್ರೆಸ್ ಗೆ ಬಹುಮತ ಬರಲಿಲ್ಲವೆಂದು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣ್ಣೀರಾದ ಘಟನೆ ನಡೆದಿದೆ.
ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ವೇಳೆ ಸಿದ್ದರಾಮಯ್ಯ ಅವರು ತಮ್ಮ ಆಪ್ತರೊಂದಿಗೆ ಮಾತನಾಡಿದ್ದು, ರಾಜ್ಯದಲ್ಲಿ ನಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದೇವೆ. ಆದರೂ ಮತ್ತೊಮ್ಮೆ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಸಿಎಂ ಮಾತುಗಳನ್ನು ಕೇಳಿ ಎಂಎಲ್ ಸಿ ಧರ್ಮಸೇನಾ ಜತೆಗೆ ಕೆಲ ಶಾಸಕರು ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ನಾನು ಎಷ್ಟೇಲ್ಲಾ ಪ್ರಯತ್ನ ಮಾಡಿದ್ದೇನೆ. ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯವನ್ನೆಲ್ಲಾ ಸುತ್ತಿ ಪಕ್ಷವನ್ನು ಮತ್ತಷ್ಟು ಬಲಪಡಿಸಿದ್ದೆ, ಆದರೂ ಕೆಲ ನಾಯಕರು ನನ್ನ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಣ್ಣೀರು ಹಾಕಿದ್ದನ್ನು ರಾಮಲಿಂಗಾ ರೆಡ್ಡಿ ಅವರು ನಿರಾಕರಿಸಿದ್ದಾರೆ.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ರಚನೆಗೆ ಸಂಖ್ಯಾ ಬಲವಿದೆ. ಈ ಆಧಾರದ ಮೇಲೆ ರಾಜ್ಯಪಾಲರು ಅವಕಾಶ ಕೊಡಬೇಕು. ಒಂದು ವೇಳೆ ಬಿಜೆಪಿಗೆ ಅವಕಾಶ ಕೊಟ್ಟರೆ ಸಂವಿಧಾನ ವಿರೋಧಿಯಾಗುತ್ತೆ ಎಂದರು.
ಬಿಜೆಪಿಗೆ ಅವಕಾಶ ಕೊಟ್ಟರೆ ಇದರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತೆ. ಸಂವಿಧಾನ ನಿಯಮಾವಳಿಯಂತೆ ನಡೆದುಕೊಳ್ಳಬೇಕು. ಸಂವಿಧಾನ ಬಾಹಿರವಾಗಿ ನಡೆದುಕೊಂಡರೆ ರಾಜ್ಯಪಾಲರ ಹುದ್ದೆಗೆ ಗೌರವ ಇರಲ್ಲ. ಬಿಜೆಪಿ ಕುದರೆ ವ್ಯಾಪರಕ್ಕೆ ಮುಂದಾಗಿದೆ. ಅದ್ರೆ ನಮ್ಮ ಶಾಸಕರು ಒಂದಾಗಿದ್ದೇವೆ ಎಂದರು.