ನವದೆಹಲಿ, ಮೇ 15-ವಾಹನ ನಿಲುಗಡೆ ವಿಷಯದಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ 65 ವರ್ಷದ ವೃದ್ಧನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಾಜಿ ಕ್ರಿಕೆಟ್ ತಾರೆ ಮತ್ತು ಪಂಜಾಬ್ ಪ್ರವಾಸೋದ್ಯಮ ಸಚಿವ ನವಜೋತ್ ಸಿಂಗ್ ಸಿಧು ಅವರನ್ನು ಸುಪ್ರೀಂಕೋರ್ಟ್ ತಪ್ಪಿತಸ್ಥ ಎಂದು ಘೋಷಿಸಿದೆ. ಆದರೆ 1988ರ ಈ ಪ್ರಕರಣದಲ್ಲಿ ಸಿಧುಗೆ ಶಿಕ್ಷೆ ವಿಧಿಸಲಾಗಿಲ್ಲ ಬದಲಿಗೆ 1,000 ರೂ. ದಂಡ ಹಾಕಲಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಗಳಾದ ಜೆ.ಚಮಲೇಶ್ವರ್ ಮತ್ತು ಸಂಜಯ್ ಕಿಷನ್ ಕೌಲ್ ಅವರನ್ನು ಒಳಗೊಂಡ ಪೀಠವು, ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 323ರ ಪ್ರಕಾರ (ಘಾಸಿಗೊಳಿಸುವಿಕೆ) ಸಿಧುವನ್ನು ತಪ್ಪಿತಸ್ಥ ಎಂದು ಘೋಷಿಸಿದ್ದು, ಅಪರಾಧಕ್ಕಾಗಿ 1,000 ರೂ. ದಂಡ ವಿಧಿಸಿದೆ.
ಈ ಪ್ರಕರಣದಲ್ಲಿ ಆರೋಪಿ-1(ನವಜೋತ್ ಸಿಂಗ್ ಸಿಧು)ಗೆ ಜೈಲು ಶಿಕ್ಷೆ ವಿಧಿಸಿಲ್ಲ. ಆದರೆ 1,000 ರೂ. ದಂಡ ಹಾಕಲಾಗಿದೆ. ಆರೋಪಿ-2(ರೂಪಿಂದರ್ ಸಿಂಗ್ ಸಿಧು)ನನ್ನು ಖುಲಾಸೆಗೊಳಿಸಲಾಗಿದೆ ಎಂದು ಪೀಠ ಹೇಳಿದೆ.
ಡಿಸೆಂಬರ್ 27, 1988ರಲ್ಲಿ ಸಿಧು ಮತ್ತು ರೂಪಿಂದರ್ ಪಟಿಯಾಲಾದ ಶೇರವಾಲಾ ಗೇಟ್ ಕ್ರಾಸಿಂಗ್ ಬಳಿ ತಮ್ಮ ಜಿಪ್ಸಿ ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಿಧು ಮತ್ತು ಗುರುನಾಮ್ ಸಿಂಗ್ (65) ಎಂಬ ವ್ಯಕ್ತಿ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಯಿತು. ಸಿಧು ಗುರುನಾಮ್ ಸಿಂಗ್ ತಲೆಗೆ ಬಲವಾಗಿ ಹೊಡೆದರು. ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ 30 ವರ್ಷಗಳಿಂದ ಈ ಪ್ರಕರಣ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಗಾಗಿತ್ತು.