ಬೆಂಗಳೂರು, ಮೇ 15- ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಜೆಡಿಎಸ್‍ಗೆ
ಬೆಂಬಲ ಘೋಷಿಸಿರುವ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ಸಿದ್ದತೆ ನಡೆಸಿದೆ. ಈ ಸಂಬಂಧ
ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ
ಎಚ್.ಡಿ.ದೇವೇಗೌಡರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಸಮಾನ ಮನಸ್ಕ ಪಕ್ಷಗಳು ಸೇರಿ ಸರ್ಕಾರ ರಚನೆಗೆ ಇರುವ ಸಮ್ಮತಿಯನ್ನು ಅವರು ಸೂಚಿಸಿದ್ದಾರೆ.
ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರಳ
ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಚಟುವಟಿಕೆ
ಬಿರುಸುಗೊಂಡಿದೆ.
ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್,
ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಅನೇಕ ವರಿಷ್ಠರು ಇಂದು ಮುಖ್ಯಮಂತ್ರಿ ನಿವಾಸದಲ್ಲಿ ಸಭೆ
ನಡೆಸಿ ಫಲಿತಾಂಶ ಅತಂತ್ರವಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಸರ್ಕಾರ ರಚಿಸಲು
ತೀರ್ಮಾನಿಸಿದರು.ಈ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ
ಕುಮಾರಸ್ವಾಮಿಯವರುಮುಖ್ಯಮಂತ್ರಿಯಾಗುವ ನಿರೀಕ್ಷೆಯಿದೆ. ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ
ನಂತರ ಮಾತನಾಡುವುದಾಗಿ ವರಿಷ್ಠರು ತಿಳಿಸಿದ್ದಾರೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಜನರು
ಕೊಟ್ಟ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ
ಬಂದಿಲ್ಲ. ಜೆಡಿಎಸ್ ಸರ್ಕಾರ ರಚಿಸಲು ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು
ಹೇಳಿದ್ದಾರೆ.
ಜಾತ್ಯತೀತ ಹಿನ್ನೆಲೆ ಇರುವ ಪಕ್ಷದೊಂದಿಗೆ ಕೈ ಜೋಡಿಸಿ ಸಂಪೂರ್ಣ ಬೆಂಬಲ ನೀಡುವುದಕ್ಕೆ
ತೀರ್ಮಾನ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಜನಾದೇಶವನ್ನು ನಾವು
ಗೌರವಿಸುತ್ತೇವೆ. ಜೆಡಿಎಸ್ ಬೆಂಬಲಿಸಲು ತೀರ್ಮಾನ ಕೈಗೊಂಡಿದ್ದೇವೆ. ಜೆಡಿಎಸ್‍ಗೆ ಬೆಂಬಲ
ಕೊಡುವುದು ಎಐಸಿಸಿ ನಿರ್ಧಾರವಾಗಿದೆ. ಮುಂದಿನ ಬೆಳವಣಿಗೆಗಳ ಬಗ್ಗೆ ಮತ್ತೆ ಮಾತನಾಡುತ್ತೇವೆ
ಎಂದು ಹೇಳಿದರು.