ಸರ್ಕಾರ ರಚನೆಗೆ ಬಿಜೆಪಿ ಕಸರತ್ತು; ಕಾಂಗ್ರೆಸ್-ಜೆಡಿಎಸ್ ನಿಂದ ಮೈತ್ರಿ ಸರ್ಕಾರ ರಚನೆಗೆ ಹಕ್ಕು ಮಂಡನೆ; ಎಲ್ಲರ ಚಿತ್ತ ರಾಜ್ಯಪಾಲರತ್ತ

ಬೆಂಗಳೂರು:ಮೇ-15: ಶತಾಯಗತಾಯ ಅಧಿಕಾರಕ್ಕೆ ಬರಲೇಬೇಕೆಂದು ತೀರ್ಮಾನಿಸಿದ್ದ ಬಿಜೆಪಿ 104
ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ
ರಚನೆಗೆ ಬೇಕಾದ ಮ್ಯಾಜಿಕ್ ಸಂಖ್ಯೆ 113ನ್ನು ತಲುಪದೇ ಅತಂತ್ರ ಸ್ಥಿಯಲ್ಲಿದೆ. ಆದಾಗ್ಯೂ
ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಮಗೇ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ
ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇದ್ರ ಸಚಿವ ಅನಂತಕುಮಾರ್ ಸೇರಿದಂತೆ ರಾಜ್ಯ ಬಿಜೆಪಿ
ನಾಯಕರು ರಾಜ್ಯಪಾಲ ವಜುಬಾಯಿ ವಾಲಾರನ್ನು ಭೇಟಿಯಾಗಿ ಕೋರಿದ್ದಾರೆ.

ಈ ಬಾರಿ ರಾಜ್ಯ ವಿಧಾನಸಭ ಅಚುನಾವಣೆಯಲ್ಲಿ ಯಾವೊಂದು ಪಕ್ಷವೂ ಸ್ಪಷ್ಟ ಬಹುಮತ ಪಡೆದಿಲ್ಲ.
ಬಿಜೆಪಿ 104 ಸ್ಥಾನಗಳನ್ನು ಪಡೆದಿದ್ದು, ಕಾಂಗ್ರೆಸ್‌ 77 ಮತ್ತು ಜೆಡಿಎಸ್‌ 39
ಸ್ಥಾನಗಳನ್ನು ಪಡೆದುಕೊಂಡಿದೆ. ಪಕ್ಷೇತರರು ಕೇವಲ 2 ಸ್ಥಾನಗಳನ್ನು ಪಡೆದಿದ್ದಾರೆ.

ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಬಾರದೆಂದು ನಿರ್ಧರಿಸಿರುವ ಕಾಂಗ್ರೆಸ್ ಈಗಾಗಲೇ
ಜೆಡಿಎಸ್ ಜತೆ ಬೆಂಬಲ ಘೋಷಿಸಿದ್ದು, ಮೈತ್ರಿ ಸರ್ಕಾರ ರಚನೆಗೆ ತಮಗೆ ಒಪ್ಪಿಗೆ ಇರುವುದಾಗಿ
ತಿಳಿಸಿದೆ. ಅಲ್ಲದೇ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಮಾಡಲು ಅಭ್ಯಂತರವಿಲ್ಲ ಎಂದು
ಸ್ಪಷ್ಟಪಡಿಸಿದೆ. ಆದರೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ತಡೆ ನೀಡಲು
ಮುಂದಾಗಿರುವ ಬಿಜೆಪಿ ನಾಯಕರು ಸಭೆಗಳ ಮೇಲೆ ಸಭೆ ನಡೆಸಿ, ರಾಜ್ಯಪಾಲರನ್ನು ಭೇಟಿಯಾಗಿ
ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ತಮಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು
ಎಂದಿ ಕೋರಿದೆ. ಅಲ್ಲದೇ ಒಂದು ವಾರ ಕಾಲವಕಾಶ ನೀಡಿದರೆ ಬಹುಮತ ಸಾಬೀತುಪಡಿಸುವುದಾಗಿ
ತಿಳಿಸಿದೆ.

ಈ ನಡುವೆ ಬಿಜೆಪಿ ನಾಯಕರು ರೆಸಾರ್ಟ್ ರಾಜಕೀಯದ ತಂತ್ರ ಹೆಣೆದಿದ್ದು, ಪಕ್ಷೇತರರನ್ನು ಹಾಗೂ
ಇತರ ಪಕ್ಷದವರನ್ನು ತಮ್ಮತ್ತ ಸೆಳೆಯಲು ಮುಂದಾಗಿದೆ.

ಇನ್ನು ಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿಕುಮಾರಸ್ವಾಮಿ
ಸೇರಿದಂತೆ ಹಲವರು ರಾಜ್ಯಪಾಲ ವಜುಬಾಯಿ ವಾಲಾ ಭೇಟಿಗೆ ತೆರಳಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ
ಸರ್ಕಾರ ರಚನೆ ಮಾಡುವುದಾಗಿ ಹಾಗೂ ಎರಡೂ ಮೈತ್ರಿ ಪಕ್ಷಗಳಿಂದಾಗಿ ತಮ್ಮ ಬಳಿ ಇರುವ ಸದಸ್ಯರ
ಸಂಖ್ಯೆ ಮ್ಯಾಜಿಕ್ ಸಂಖ್ಯೆ ತಲುಪುವ ಬಗ್ಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ತಮಗೆ ಸರ್ಕಾರ
ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆ ಇದೀಗ ಎಲ್ಲರ ಚಿತ್ತ ರಾಜ್ಯಪಾಲರತ್ತ ನೆಟ್ಟಿದೆ. ಅವರು ತಮ್ಮ ವಿವೇಚನಾ ಅಧಿಕಾರ
ಬಳಸಬೇಕಿದ್ದು, ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಬಹುದು ಅಥವಾ ಚುನಾವಣೆ
ನಂತರ ಮೈತ್ರಿ ಮಾಡಿಕೊಂಡು ಅಗತ್ಯ ಸಂಖ್ಯಾ ಬಲ ತೋರಿಸುವ ಪಕ್ಷವನ್ನು ಸರ್ಕಾರ ರಚನೆಗೆ
ಆಹ್ವಾನಿಸಬಹುದಾಗಿದೆ. ಈ ನಿಟ್ತಿನಲ್ಲಿ ರಾಜ್ಯಪಾಲರು ಯಾರಿಗೆ ಸರ್ಕಾರ ರ ಹನೆಗೆ ಅವಕಾಶ
ನೀಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ವಿಧಾನಸಭೆಯ 224 ಸ್ಥಾನಗಳ ಪೈಕಿ ಚುನಾವಣೆ 222 ಸ್ಥಾನಗಳಿಗೆ ನಡೆದಿದೆ. ವಿಧಾನಸಭೆಯಲ್ಲಿರುವ
ಒಟ್ಟು ಸ್ಥಾನಗಳನ್ನು ಪರಿಗಣಿಸಿದರೆ ಬಹುಮತಕ್ಕೆ 113 ಸ್ಥಾನಗಳು ಅಗತ್ಯವಾಗಿದೆ. ಆದರೆ ಈಗಿನ
ಸ್ಥಿತಿಯಲ್ಲಿ 222ರ ಅರ್ಧಕ್ಕಿಂತ ಹೆಚ್ಚು ಅಂದರೆ 112 ಸ್ಥಾನಗಳ ಅಗತ್ಯವಿದೆ.
……….

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ