ಗಾಜಾ ಸಿಟಿ, ಮೇ 15-ಜೆರುಸಲೆಂನಲ್ಲಿ ಅಮೆರಿಕ ರಾಯಭಾರಿ ಕಚೇರಿ ಸ್ಥಾಪನೆ ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಇಸ್ರೇಲಿ ಸೇನಾ ಪಡೆಗಳ ಬಲಪ್ರಯೋಗದಲ್ಲಿ ಈವರೆಗೆ 55ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಬಲಿಯಾಗಿದ್ದು, 1,200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದೇ ವೇಳೆ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದ ಸ್ಥಳದಿಂದ ಕೆಲವು ಮೈಲಿಗಳ ಅಂತರದ ಜೆರುಸಲೆಂನಲ್ಲಿ ಅಮೆರಿಕದ ಹೊಸ ರಾಯಭಾರಿ ಕಚೇರಿಯ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಅಮೆರಿಕ ಮತ್ತು ಇಸ್ರೇಲ್ನ ಉನ್ನತಾಧಿಕಾರಿಗಳು ಪಾಲ್ಗೊಂಡರು.
ಅಮೆರಿಕ ರಾಜಭಾರಿ ಕಚೇರಿ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ಯಾಲೆಸ್ತೀನಿಯರು ಗಾಜಾ ಪಟ್ಟಿಯಲ್ಲಿ ಗೋಧಿ ಬೆಳೆಗೆ ಮತ್ತು ಟೈರ್ಗಳಿಗೆ ಬೆಂಕಿ ಹಚ್ಚಿ ಇಸ್ರೇಲಿ ಯೋಧರತ್ತ ಕಲ್ಲು ತೂರಿದರು. ಈ ಸಂದರ್ಭದಲ್ಲಿ ಘರ್ಷಣೆ ಭುಗಿಲೆದ್ದಿತ್ತು. ಇಸ್ರೇಲಿ ಪಡೆಗಳು ಗುಂಡು ಹಾರಿಸಿದಾಗ 55 ಪ್ಯಾಲೆಸ್ತೀನಿಯರು ಮೃತಪಟ್ಟು, 1,200ಕ್ಕೂ ಹೆಚ್ಚು ಜನರು ಗಾಯಗೊಂಡರು.