ರಕ್ತಸಿಕ್ತವಾದ ಪಶ್ಚಿಮ ಬಂಗಾಳ ಚುನಾವಣೆ: ಹಿಂಸಾಚಾಕ್ಕೆ 6 ಮಂದಿ ಬಲಿ

ಕೋಲ್ಕತ್ತಾ,ಮೇ 14

ಪಶ್ಚಿಮ ಬಂಗಾಳದಲ್ಲಿ ಇಂದು ಪಂಚಾಯತ್‌ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ರಾಜ್ಯದ ಹಲವು ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರಕ್ಕೆ ಇದುವರೆಗೂ 6 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಬೆಳಗ್ಗೆ ಏಳು ಗಂಟೆಯಿಂದ 621 ಜಿಲ್ಲಾ ಪರಿಷತ್‌, 6157 ಪಂಚಾಯತ್‌ ಸಮಿತಿಗಳು ಹಾಗೂ 31,827 ಗ್ರಾಮ ಪಂಚಾಯತ್‌ಗಳಿಗೆ ಮತದಾನ ನಡೆಯುತ್ತಿದೆ. ಮತ ಚಲಾವಣೆ ಪ್ರಕ್ರಿಯೆ ಆರಂಭವಾದ ಕೆಲವೇ ಕೆಲ ಗಂಟೆಯಲ್ಲಿ ಹಲವೆಡೆ ಸಂಘರ್ಷ, ಗಲಾಟೆಗಳು ಸಂಭವಿಸಿವೆ.
ಒಂದೆಡೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ನಡುವೆ ಘರ್ಷಣೆ ನಡೆದಿದರೆ, ಮತ್ತೊಂದೆಡೆ ಮತ ಚಲಾವಣೆಗೆ ತೆರಳದಂತೆ ಜನರನ್ನು ಟಿಎಂಸಿ ಕಾರ್ಯಕರ್ತರು ತಡೆದು, ಮತದಾನಕ್ಕೆ ಅಡ್ಡಿ ಪಡಿಸಿದ್ದಾರೆ. ಇದರ ನಡುವೆ ಸ್ಥಳೀಯ ಸಚಿವರೊಬ್ಬರು ಬಿಜೆಪಿ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿ ಅಟ್ಟಹಾಸ ಮೆರೆದಿದ್ದಾರೆ.
ಕೂಚ್‌‌ ಬೆಹಾರ್‌ನಲ್ಲಿ ಮತ ಚಲಾವಣೆಗೆ ಹೋಗುತ್ತಿದವರನ್ನು ಟಿಎಂಸಿ ಕಾರ್ಯಕರ್ತರು ತಡೆದಿದ್ದು, ಇದರಿಂದ ಗಲಾಟೆ ಶುರುವಾಗಿದೆ. ಇದರಲ್ಲಿ ಸುಮಾರು 20 ಮಂದಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ದೊಣ್ಣೆಗಳಿಂದ ಜನರ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ಇಲ್ಲಿನ ಬೂತ್‌ ನಂಬರ್‌ 8/12ರಲ್ಲಿ ಸಚಿವ ರವೀಂದ್ರನಾಥ್‌ ಘೋಷ್‌ ಅಟ್ಟಹಾಸ ಮೆರೆದಿದ್ದಾರೆ. ಬಿಜೆಪಿ ಕಾರ್ಯಕರ್ತ ಸುಜಿತ್‌ ಕುಮಾರ್‌ ದಾಸ್‌ ಎಂಬುವವರಿಗೆ ಸಚಿವ ಘೋಷ್‌ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮತ್ತೊಂದೆಡೆ, ಕಳೆದ ರಾತ್ರಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಭಾರಿ ಗಲಾಟೆ ನಡೆದಿದೆ. ಈ ವೇಳೆ ಗುಂಡಿನ ದಾಳಿ ಸಹ ಮಾಡಲಾಗಿತ್ತು. ಟಿಎಂಸಿ ಕಾರ್ಯಕರ್ತ ಅನರುಲ್‌ ಮಿತಾ ಎಂಬುವವರಿಗೆ ಗುಂಡೇಟು ಬಿದ್ದಿದೆ. ಬಿಜೆಪಿ ಕಾರ್ಯಕರ್ತರು ಈ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅನರುಲ್‌ ದೂರಿದ್ದಾನೆ.
ಇನ್ನೊಂದೆಡೆ ದಕ್ಷಿಣ 24 ಪಗರಣ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಮಧ್ಯ ರಾತ್ರಿ ಮನೆಗೆ ಬೆಂಕಿ ಹಚ್ಚಿ ಸಿಪಿಐಎಂ ಕಾರ್ಯಕರ್ತ ಮತ್ತು ಆತನ ಪತ್ನಿಯನ್ನು ಸಜೀವವಾಗಿ ಸುಟ್ಟು ಹಾಕಿದ್ದಾರೆ. ಈ ಕೃತ್ಯ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಸಿಪಿಐಎಂ ಆರೋಪಿಸಿದೆ.
ಇನ್ನು, ಚುನಾವಣೆ ಪೂರ್ವದಲ್ಲೂ ರಾಜಕೀಯ ಸಂಘರ್ಷಗಳು ನಡೆದಿದ್ದು, ಇದರಲ್ಲಿ ಬಿಜೆಪಿ ಮತ್ತು ಟಿಎಂಸಿಗೆ ಸೇರಿದ 60ಕ್ಕೂ ಹೆಚ್ಚು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಸುಮಾರು 60 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ