ಬೆಂಗಳೂರು, ಮೇ 14-ರಾಜ್ಯದ ವಿವಿಧೆಡೆ ವರುಣನ ಅಬ್ಬರ ಮುಂದುವರೆದಿದ್ದು, ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿಪಾಸ್ತಿಗಳು ಭಾರೀ ನಷ್ಟವಾಗಿದೆ. ಹವಾ ಮುನ್ಸೂಚನೆ ಪ್ರಕಾರ ಇನ್ನೊಂದು ವಾರ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರೂ, ವಾಯುವ್ಯ ಅಭಿಮುಖವಾಗಿ ಚಲಿಸುತ್ತಿರುವುದರಿಂದ ಅದರ ಪ್ರಮಾಣ ಕಡಿಮೆ. ಆದರೆ ವಾತಾವರಣದಲ್ಲಿ ಬದಲಾವಣೆ ಉಂಟಾಗಿದ್ದು, ಮೋಡಗಳ ಸಾಲು ಹೆಚ್ಚಾಗಿರುವುದರಿಂದ ಇದೇ 19 ರವರೆಗೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದ್ದಾರೆ.
ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ, ಮಲೆನಾಡಿನ ಭಾಗದಲ್ಲಿ ಒಂದಲ್ಲ ಒಂದು ಕಡೆ ಇದೇ ರೀತಿ ಮಳೆ ಮುಂದುವರೆಯಲಿದೆ. ಮೇ ತಿಂಗಳಿನಲ್ಲಿ ಪೂರ್ವ ಮುಂಗಾರು ಮಳೆಯಾಗುವುದು ಸಹಜ. ಈ ಬಾರಿ ಕೆಲವೆಡೆ ಹೆಚ್ಚು ಮಳೆಯಾಗುತ್ತಿದೆ. ಈಗಿರುವ ಹವಾ ಮುನ್ಸೂಚನೆ ಪ್ರಕಾರ ನೈರುತ್ಯ ಮುಂಗಾರು ಮೇ ತಿಂಗಳ ಅಂತ್ಯಕ್ಕೆ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಕಳೆದ ಮೂರು ದಿನಗಳಿಂದ ವಿವಿಧೆಡೆ ಭಾರೀ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಕಳೆದ ರಾತ್ರಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಸುರಿದ ಭಾರೀ ಬಿರುಗಾಳಿ ಮಳೆಗೆ 17ಕ್ಕೂ ಮನೆಗಳ ಹೆಂಚು, ಶೀಟ್‍ಗಳು ಹಾರಿ ಹೋಗಿವೆ.
ರಾತ್ರಿ 11.30ರ ಸಮಯದಲ್ಲಿ ಆರಂಭವಾದ ಮಳೆ ದಂಡಿನಶಿವರ, ಹಡವನಹಳ್ಳಿ ಸೇರಿದಂತೆ ವಿವಿಧೆಡೆ ಮಳೆಯಾಗಿದ್ದು, ಮನೆಗಳ ಹೆಂಚು, ಸಿಮೆಂಟ್ ಶೀಟ್‍ಗಳು ಪುಡಿಪುಡಿಯಾಗಿವೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ಕೆಲವೆಡೆ ಗಾಳಿಗೆ ಅಡಕೆ, ತೆಂಗಿನ ಮರಗಳು ಧರೆಗೆ ಉರುಳಿವೆ. ಲಕ್ಷಾಂತರ ರೂ. ಬೆಳೆಗಳು ನಷ್ಟವಾಗಿವೆ.
ಒಟ್ಟಾರೆ ಅಕಾಲಿಕ ಮಳೆ ತುರುವೇಕೆರೆಯಲ್ಲಿ ಭಾರೀ ಅವಾಂತರ ಸೃಷ್ಟಿಸಿದೆ.
ಉದ್ಯಾನನಗರಿ ಬೆಂಗಳೂರಿನಲ್ಲೂ ಸಹ ನಿನ್ನೆ ಸಂಜೆ 3 ಗಂಟೆ ಪ್ರಾರಂಭವಾದ ಮಳೆ ಎರಡು ಗಂಟೆ ಕಾಲ ಸುರಿದಿದ್ದು, ಅಂಡರ್‍ಪಾಸ್‍ಗಳು, ರಸ್ತೆಗಳೆಲ್ಲ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು.
ಹಾಸನದಲ್ಲಿ ವ್ಯಕ್ತಿಯೊಬ್ಬನಿಗೆ ಸಿಡಿಲು ಬಡಿದು ಸಾವನ್ನಪಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರದ ಪಾತಪಾಳ್ಯದ ಬಳಿ ಮರವೊಂದು ಹಸುವಿನ ಮೇಲೆ ಉರುಳಿ ಬಿದ್ದ ಪರಿಣಾಮ ಹಸು ಸಾವನ್ನಪ್ಪಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಭಾರೀ ಮಳೆಯಾಗಿದ್ದು, ಅಪಾರ ಬೆಳೆ ನಷ್ಟವಾಗಿದೆ.
ಚಿಕ್ಕಬಳ್ಳಾಪುರ, ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ಹಾಸನ, ಮಂಡ್ಯ, ಕೋಲಾರ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ.
ಒಂದೆಡೆ ಬಿಸಿಲ ಬೇಗೆಯಿಂದ ತತ್ತರಿಸಿರುವ ಜನತೆಗೆ ವರುಣ ತಂಪೆರೆದರೆ, ಮತ್ತೊಂದೆಡೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಉಂಟಾಗಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.