
ಬೆಂಗಳೂರು,ಮೇ14- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹೊಸ ದಾಖಲೆಯ ಮತದಾನವಾಗಿದೆ. ಮೇ 12ರಂದು ರಾಜ್ಯದ 222 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಒಟ್ಟಾರೆ ಸರಾಸರಿ ಶೇ. 72.36ರಷ್ಟು ಮತದಾನವಾಗಿದ್ದು, ಇದು ಕಳೆದೆರಡು ಚುನಾವಣೆಗಳಲ್ಲೇ ಗರಿಷ್ಠ ಪ್ರಮಾಣದ ಮತದಾನವಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಶೇ.73.24ರಷ್ಟು ಪುರುಷರು ಹಾಗೂ ಶೇ.71.08ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ. ಕಳೆದ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಭಾರತದ ಚುನಾವಣಾ ಆಯೋಗ ಮತದಾನದ ಬಗ್ಗೆ ಕೈಗೊಂಡ ಜಾಗೃತಿ ಹಾಗೂ ಕೆಲ ಸಂಘಸಂಸ್ಥೆಗಳು ಕೂಡ ಮತದಾನದ ಬಗ್ಗೆ ಮೂಡಿಸಿದ ಅರಿವಿನಿಂದಾಗಿ ಮತದಾನದಲ್ಲಿ ಹೆಚ್ಚಳ ಕಂಡುಬಂದಿದೆ.
ಕಳೆದ 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ.64.78ರಷ್ಟು ಮತದಾನವಾಗಿದ್ದರೆ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ.71ರಷ್ಟು ಮತದಾನವಾಗಿತ್ತು. 2008ರಲ್ಲಿ ಶೇ.66.33ರಷ್ಟು ಪುರುಷರು, ಶೇ.63.23ರಷ್ಟು ಮಹಿಳೆಯರು ಮತ ಚಲಾಯಿಸಿದ್ದರೆ 2013ರಲ್ಲಿ ಶೇ.71.84ರಷ್ಟು ಪುರುಷರು, ಶೇ.70.01ರಷ್ಟು ಮತದಾನ ಮಾಡಿದ್ದರು.
ಈ ಎರಡೂ ಚುನಾವಣೆಗೆ ಹೋಲಿಸಿದರೆ ಮಹಿಳಾ ಹಾಗೂ ಪುರುಷರಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿರುವುದು ಕಂಡುಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟಾರೆ ಸರಾಸರಿ ಶೇ.55.34ರಷ್ಟು ಈ ಬಾರಿಯ ಚುನಾವಣೆಯಲ್ಲಿ ಮತದಾನವಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.54.72ರಷ್ಟು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.84.03ರಷ್ಟು ಮತದಾನವಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕನಿಷ್ಠ ಶೇ.54.72ರಷ್ಟು ಮತದಾನವಾಗಿದ್ದರೆ, ರಾಮನಗರ ಜಿಲ್ಲೆಯಲ್ಲಿ ಗರಿಷ್ಠ ಶೇ.84.52ರಷ್ಟು ಮತದಾನವಾಗಿದೆ.