ಬೆಂಗಳೂರು, ಮೇ 14- ಕಳೆದ ಮೂರು ದಿನಗಳಿಂದ ನಗರದಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದ್ದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ತಮ್ಮ ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತಿದ್ದಾರೆ.
ಮಳೆ ಹಾನಿಗೆ ನಗರದಲ್ಲಿ ನೂರಾರು ಮರಗಳು ಧರೆಗುರುಳುತ್ತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ತೊಂದರೆ ಎದುರಾಗುತ್ತಿದ್ದರೂ ಅನಾಹುತ ಪ್ರದೇಶಕ್ಕೆ ತಕ್ಷಣವೇ ಧಾವಿಸಬೇಕಾದ ಪ್ರಹರಿ ವಾಹನಗಳು ಆರು ತಿಂಗಳಿನಿಂದ ಕೆಟ್ಟು ನಿಂತಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ವಾಹನಗಳನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೂರು ಪ್ರಹರಿ ವಾಹನಗಳಿವೆ. ಇವುಗಳಲ್ಲಿ ಎರಡು ವಾಹನ ಕೆಟ್ಟು ನಿಂತು 6 ತಿಂಗಳು ಕಳೆದರೂ ಎಇಇ ರಾಥೋಡ್ ಮತ್ತು ಸಾರಿಗೆ ವಿಭಾಗದ ಸೂಪರ್ವೈಸರ್ ಹನುಮಂತಪ್ಪ ವಾಹನ ಕೆಟ್ಟು ನಿಂತಿರುವುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.
ಮಳೆ ಅನಾಹುತ ಕುರಿತಂತೆ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದ ಕೂಡಲೇ ಅಲ್ಲಿನ ಸಿಬ್ಬಂದಿಗಳು ಆಯಾ ವಲಯಗಳ ಪ್ರಹರಿ ವಾಹನಗಳಿಗೆ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚಿಸುತ್ತಾರೆ.
ಮಳೆ ಸಂದರ್ಭದಲ್ಲಿ ಗರಗಸ , ಹಗ್ಗ ಮತ್ತಿತರ ಪರಿಹಾರ ಸಾಮಗ್ರಿಗಳೊಂದಿಗೆ ಸಿಬ್ಬಂದಿಗಳು ಪ್ರಹರಿ ವಾಹನದಲ್ಲಿ ಸನ್ನದ್ಧರಾಗಿರಬೇಕು. ಅನಾಹುತದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು.
ಇತ್ತೀಚೆಗೆ ಭಾರೀ ಮಳೆಯಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಮರಗಳು ಧರೆಗುರುಳಿ ಬೀಳುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿ ಇದ್ದರೂ ಪಾಲಿಕೆ ಅಧಿಕಾರಿಗಳು ಕಳೆದ ಆರು ತಿಂಗಳಿನಿಂದ ಕೆಟ್ಟು ನಿಂತಿರುವ ಎರಡು ಪ್ರಹರಿ ವಾಹನಗಳನ್ನು ದುರಸ್ತಿಗೊಳಿಸದಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ.
ಚುನಾವಣೆ ಸಂದರ್ಭದಲ್ಲಿ ಪಾಲಿಕೆ ಆಯುಕ್ತರ ವರ್ಗಾವಣೆಯಾಗಿದ್ದು , ನೂತನ ಕಮಿಷನರ್ ಆಗಿ ಮಹೇಶ್ವರರಾವ್ ಅಧಿಕಾರ ವಹಿಸಿಕೊಂಡಿದ್ದಾರೆ.ಇವರು ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಆಯುಕ್ತರು ಸಾರ್ವಜನಿಕರ ಟೀಕೆಗೆ ಗುರಿಯಾಗಬೇಕಾಗುತ್ತದೆ.
ಸಂಬಂಧಪಟ್ಟವರು ಈ ಕೂಡಲೇ ಎಚ್ಚೆತ್ತುಕೊಂಡು ಕರ್ತವ್ಯ ಮರೆತು ಉದಾಸೀನ ತೋರುತ್ತಿರುವ ರಾಥೋಡ್ ಮತ್ತು ಹನುಮಂತಪ್ಪ ಅವರಿಗೆ ಚುರುಕು ಮುಟ್ಟಿಸುವ ಅವಶ್ಯಕತೆ ಇದೆ.