ಚನ್ನಪಟ್ಟಣ, ಮೇ 14- ರಾಜಕೀಯವಾಗಿ ನನ್ನನ್ನು ಮುಗಿಸಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ ಎಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಅವರು ಕಪ್ಪು ಹಣ ಹಂಚಿಕೆ ಮಾಡದ್ದಿದ್ದರೆ ನಾನು ನಿರಾಶದಾಯಕವಾಗಿ ಗೆಲ್ಲುತ್ತಿದ್ದೆ. ಆದರೆ, ಈಗ ಕೂದಲೆಳೆ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಹಣ ಹಾಗೂ ಕಣ್ಣೀರು ಕೆಲಸ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಉಭಯ ಪಕ್ಷದ ನಾಯಕರ ಬಗ್ಗೆ ಟೀಕೆ ಮಾಡಿದ ಯೋಗೇಶ್ವರ್, ನನ್ನ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಹಾಗೂ ನೀರಾವರಿ ಕೆಲಸಗಳು ನನ್ನ ಗೆಲುವಿಗೆ ದಿಕ್ಸೂಚಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಕ್ಷೇತ್ರದಲ್ಲಿ ನಮ್ಮ ಪಕ್ಷದ ಕೆಲ ಮುಖಂಡರನ್ನು ಖರೀದಿ ಮಾಡಲಾಗಿದೆ. ಆದರೂ ಮತದಾರರು ನನ್ನ ಕೈ ಬಿಡುವುದಿಲ್ಲ. ಗೆಲುವು ನನ್ನದೇ ಎಂದು ಹೇಳಿದರು.
ಹದಿನೆಂಟು ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ನನ್ನ ಕ್ಷೇತ್ರದಲ್ಲಿ ಮಾಡಿದ್ದೇನೆ. ಒಕ್ಕಲಿಗ ಸಮುದಾಯದವನಾದ ನಾನು ರಾಜಕೀಯವಾಗಿ ಬೆಳೆಯುವುದು ಎಚ್‍ಡಿಕೆ ಮತ್ತು ಡಿಕೆಶಿ ಅವರಿಗೆ ಇಷ್ಟವಿಲ್ಲ. ಹಾಗಾಗಿ ನನ್ನನ್ನು ಸೋಲಿಸಲು ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ಡಿಕೆಶಿ ಮತ್ತು ಎಚ್‍ಡಿಕೆ ಇಬ್ಬರೂ ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ಮಣಿಸಲು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರನ್ನು ಈ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿಲ್ಲಿಸಿದರು ಎಂದರು.
ಮತದಾರರಿಗೆ ಸಾಕಷ್ಟು ಆಮಿಷವೊಡ್ಡಿದ್ದಾರೆ. ಬಿಜೆಪಿ ಮುಖಂಡರಿಗೂ ಆಮಿಷವೊಡ್ಡಿ ಚುನಾವಣಾ ಪ್ರಚಾರಕ್ಕೆ ಹೋಗದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಪಿತೂರಿ ಮಾಡಿದ್ದಾರೆ ಎಂದು ದೂರಿದರು.
ಚನ್ನಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ಅವರು ಕಪ್ಪು ಹಣದ ಹೊಳೆಯನ್ನೇ ಹರಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಕಣ್ಣೀರು ಇಟ್ಟಿದ್ದಾರೆ. ಇವರಿಬ್ಬರೂ ಹೀಗೆ ಮಾಡದಿದ್ದರೆ ನಾನು ಬಹುಮತದಿಂದ ಆಯ್ಕೆಯಾಗುತ್ತಿದ್ದೆ. ಆದರೂ ಜನರು ನನಗೆ ಆಶೀರ್ವಾದ ಮಾಡಿದ್ದು, ಕಡಿಮೆ ಅಂತರದಲ್ಲಿ ಗೆಲ್ಲುವುದಾಗಿ ತಿಳಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿರುವ ರಘುನಂದನ್ ರಾಮಣ್ಣ ಅವರು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿ ಮತದಾರರಿಗೆ ಒತ್ತಡ ಹಾಕಿ ಮತ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದರು.