ಮತದಾನ ಮಾಡಲು ಹಳ್ಳಿಗಳಿಗೆ ತೆರಳಿದ್ದ ಜನರು ವಾಪ¸ – ಟ್ರ್ಯಾಫಿಕ್ ಜಾಮ್

ಬೆಂಗಳೂರು, ಮೇ 14-ಮತದಾನ ಮಾಡಲು ಹಳ್ಳಿಗಳಿಗೆ ತೆರಳಿದ್ದ ಜನರು ಇಂದು ಬೆಳಗ್ಗೆ ನಗರಕ್ಕೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರು, ಮೈಸೂರು, ದೇವನಹಳ್ಳಿ, ಆನೇಕಲ್, ಹೊಸಕೋಟೆಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆಯೇ ಟ್ರ್ಯಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು.

ಮತದಾನ ಹಿನ್ನೆಲೆಯಲ್ಲಿಯೇ ಶುಕ್ರವಾರ ಮತ್ತು ಶನಿವಾರ ಬೆಳಗ್ಗೆಯೇ ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ್ದ ಬೆಂಗಳೂರಿನಲ್ಲಿ ವಾಸವಿರುವವರು ಭಾನುವಾರ ರಜೆ ಮುಗಿಸಿಕೊಂಡು ಇಂದು ಬೆಳಗ್ಗೆಯೇ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ವಾಪಸ್ಸಾಗುತ್ತಿದ್ದರು.
ಕೆಲವರು ಸರ್ಕಾರಿ ಮತ್ತು ಖಾಸಗಿ ಬಸ್‍ಗಳಲ್ಲಿ ತೆರಳಿದರೆ, ಇನ್ನು ಕೆಲವರು ತಮ್ಮ ದ್ವಿಚಕ್ರ ವಾಹನ, ಕಾರುಗಳಲ್ಲಿ ಗ್ರಾಮಗಳಿಗೆ ತೆರಳಿದ್ದು, ಏಕಕಾಲಕ್ಕೆ ಇಂದು ಬೆಳಗ್ಗೆಯೇ ಎಲ್ಲರೂ ನಗರಕ್ಕೆ ವಾಪಸ್ಸಾಗುತ್ತಿದ್ದ ಹಿನ್ನೆಲೆಯಲ್ಲಿ ಟ್ರಾಫಿಕ್ ಬಿಸಿ ತಟ್ಟಿತು.

ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯದಿಂದ ಯಶವಂತಪುರದವರೆಗೂ ಕಿಲೋಮೀಟರ್‍ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೈಸೂರು ರಸ್ತೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದೆ ಖಾಸಗಿ, ಸರ್ಕಾರಿ ನೌಕರರು ತೊಂದರೆ ಅನುಭವಿಸುವಂತಾಯಿತು.

ಟೋಲ್‍ನಲ್ಲೂ ಜಾಮ್:
ಮಂಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನ, ಚಿಕ್ಕಮಗಳೂರು, ಮಧುಗಿರಿ, ಪಾವಗಡ, ಬಳ್ಳಾರಿ, ರಾಯಚೂರು, ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಟೋಲ್‍ಗಳಲ್ಲಿ ವಾಹನಗಳು ಜಾಮ್ ಆಗಿದ್ದವು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ