ಹರಿದ್ವಾರ, ಮೇ13- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ಸುಪ್ರೀಂಕೋರ್ಟ್ ತೀರ್ಪು ಹಿಂದುಗಳ ಭಾವನೆಗೆ ವಿರುದ್ಧವಾಗಿ ನೀಡಿದರೆ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸುವುದಾಗಿ ವಿಶ್ವ ಹಿಂದು ಪರಿಷತ್(ವಿಎಚ್ಪಿ) ನೂತನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೊಕ್ಜೆ ಎಚ್ಚರಿಕೆ ನೀಡಿದ್ದಾರೆ. ವಿಎಚ್ಪಿ ಉನ್ನತ ಹುದ್ದೆಯನ್ನು ಅಲಂಕರಿಸಿದ ನಂತರ ಇದೇ ಮೊದಲ ಬಾರಿಗೆ ದೇವಾಲಯಗಳ ನಗರಿ ಹರಿದ್ವಾರಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅಯೋಧ್ಯೆ ರಾಮಮಂದಿರ ವಿವಾದ ತೀರ್ಪು ಸುಪ್ರೀಂಕೋರ್ಟ್ನಲ್ಲಿ ನಿರ್ಣಾಯಕ ಹಂತದಲ್ಲಿದೆ. ತೀರ್ಪು ಹಿಂದುಗಳ ಪರವಾಗಿ ವ್ಯಕ್ತವಾಗುತ್ತದೆ ಎಂಬ ಭರವಸೆ ಇದೆ. ಒಂದು ವೇಳೆ ಹಿಂದುಗಳ ಭಾವನೆಗಳಿಗೆ ವಿರುದ್ಧವಾಗಿ ತೀರ್ಪು ನೀಡಿದರೆ ರಾಮಮಂದಿರ ನಿರ್ಮಾಣ ಕುರಿತು ಕಾನೂನು ರೂಪಿಸುವಂತೆ ಸಂಸದರ ಮೇಲೆ ಒತ್ತಡ ಹೇರಲು ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು.