ಮ್ಯಾಡ್‍ರೀಡ್ (ಸ್ಪೇನ್), ಮೇ 13- ಚೆಕ್ ರಿಪಬ್ಲಿಕ್‍ನ ಟೆನ್ನಿಸ್ ಆಟಗಾರ್ತಿ ಪೆಟ್ರಾ ಕಿವ್‍ಟೋವಾ ಅವರು ನಿನ್ನೆ ಇಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ನೆದರ್‍ಲ್ಯಾಂಡ್‍ನ ಕಿಕಿ ಬ್ರಿಟಿನ್ಸ್‍ರನ್ನು ಸೋಲಿಸಿ ಮ್ಯಾಡ್‍ರೀಡ್ ಮುಕುಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಜಿದ್ದಾಜಿದ್ದಿನಿಂದ ನಡೆದ ಅಂತಿಮ ಪಂದ್ಯದ ಮೊದಲ ಸುತ್ತಿನಲ್ಲಿ ರಿಪಬ್ಲಿಕನ್ ಪೆಟ್ರಾ 7-6 ರಿಂದ ಸೆಟ್ ಜಯಿಸಿದರೂ, ನಂತರ ಸುತ್ತಿನಲ್ಲಿ ಮೈಕೊಡವಿ ಎದ್ದ ನೆದರ್‍ಲ್ಯಾಂಡ್ ಕಿಕಿ ಬ್ರಿಟಿನ್ಸ್ ಮುಂದಿನ ಸುತ್ತಿನಲ್ಲಿ 4-6 ಸೆಟ್‍ಗಳಿಂದ ಪ್ರತಿರೋಧ ತೋರಿದರೂ, ರೋಚಕ ಘಟ್ಟ ಮುಟ್ಟಿದ ಮೂರನೇ ಸುತ್ತಿನಲ್ಲಿ ಪೆಟ್ರಾ ತಮ್ಮ ಅನುಭವ ಹಾಗೂ ಚಾಕಚಕ್ಯತೆಯಿಂದ 6-3 ಸೆಟ್‍ನಿಂದ ಜಯ ಗಳಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಪೆಟ್ರಾ ಇದಕ್ಕೂ ಮುನ್ನ 2011 ಹಾಗೂ 2015ರಲ್ಲಿ ಮ್ಯಾಡ್‍ರೀಡ್ ಓಪನ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಗೆದ್ದು ಬೀಗಿದ್ದಾರೆ. ಈ ವರ್ಷದಲ್ಲಿ ಪೆಟ್ರಾ ಜಯಿಸುತ್ತಿರುವ 10 ನೆ ಪ್ರಶಸ್ತಿಯೂ ಇದಾಗಿದೆ.