ಬೆಂಗಳೂರು, ಮೇ 13- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 113ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಸ್ಪಷ್ಟ ಬಹುತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬೇರೆ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಸಂದರ್ಭವೂ ಉದ್ಬವಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಡಾಖಂಡಿತವಾಗಿ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವಿಜ್ಞಾನ ಓದಿದ ವಿದ್ಯಾರ್ಥಿ, ವಿಜ್ಞಾನದಲ್ಲಿ ಶೇ.99.99 ಖಚಿತವಿದ್ದು, 0.1ರಷ್ಟು ಅನುಮಾನಗಳಿದ್ದರೂ, ಆ 0.1ರ ಸಾಧ್ಯತೆಯಲ್ಲಿ ಏನೂ ಬೇಕಾದರೂ ಬದಲಾವಣೆಯಾಗುವ ಸಂದರ್ಭ ಇರುತ್ತದೆ. ಆದರೆ, ಈ ಬಾರಿ ಕಾಂಗ್ರೆಸ್ ಶೇ.100ಕ್ಕೆ 100ರಷ್ಟು ಯಾವುದೇ ಶಂಕೆಗಳಿಲ್ಲದೆ ಸ್ಪಷ್ಟ ಬಹುಮತಗಳಿಸಿ ಅಧಿಕಾರ ಹಿಡಿಯಲಿದೆ ಎಂದರು.
ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದ ಜತೆ ಮೈತ್ರಿಯ ಪ್ರಶ್ನೆ ಉದ್ಭವಿಸುವುದಿಲ್ಲ. ವಿರೋಧ ಪಕ್ಷದಲ್ಲಿ ಕೂರಬೇಕಾದ ಅನಿವಾರ್ಯತೆಯೂ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ನಿಗದಿ ಪಡಿಸಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದರಿಂದ ಅವರ ಆಸೆ ಈಡೇರುವುದಿಲ್ಲ. ಅವರು ಹೇಳಿದಂತೆ ನಾನೂ ಕೂಡ ಹೇಳುತ್ತೇನೆ. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಬೇಕಿದ್ದರೆ ಬರೆದುಕೊಡುತ್ತೇನೆ ಎಂದು ಹೇಳಿದರು.
ಚುನಾವಣೆ ಫಲಿತಾಂಶದ ನಂತರ ಮೇ 16ರಂದು ಹೈಕಮಾಂಡ್ ಸೂಚನೆ ಆಧರಿಸಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುವ ಸಾಧ್ಯತೆ ಇದೆ. ಅಲ್ಲಿ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ. ಹೈಕಮಾಂಡ್ ಅನುಮೋದನೆಯ ನಂತರ ಅಧಿಕೃತ ನಿರ್ಧಾರ ಹೊರ ಬೀಳಲಿದೆ ಎಂದು ತಿಳಿಸಿದರು.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರು ಮುಖ್ಯಮಂತ್ರಿ ಆಗುವುದಾದರೆ ನಾನು ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದರೆ ಅದು ಸ್ವಾಗತಾರ್ಹ. ಆದರೆ, ಮುಖ್ಯಮಂತ್ರಿ ಆಯ್ಕೆ ಮಾತ್ರ ನಿಯಮಾನುಸಾರವೇ ನಡೆಯಲಿದೆ ಎಂದರು.
ರಾಹುಲ್‍ಗಾಂಧಿ ಭರ್ಜರಿ ಪ್ರವಾಸ:
ಕರ್ನಾಟಕ ವಿಧಾನಸಭೆ ಚುನಾವಣೆ ರಾಷ್ಟ್ರ ರಾಜಕೀಯದ ದಿಕ್ಕನ್ನ ಬದಲಾಯಿಸಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ರಾಜ್ಯದಲ್ಲಿ 25 ದಿನಗಳ ಕಾಲ 30 ಜಿಲ್ಲೆಗಳಲ್ಲಿ 162 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದಾರೆ. 14ಸಾವಿರ ಕಿ.ಮೀ. ಪ್ರವಾಸ ಮಾಡಿದ್ದಾರೆ. 18 ಮೆಗಾ ರ್ಯಾಲಿಗಳನ್ನು ಮಾಡಿದ್ದಾರೆ. 65 ಕಿರು ಸಭೆಗಳು(ಕಾರ್ನರ್ ಮೀಟಿಂಗ್), 40 ರೋಡ್ ಶೋಗಳನ್ನು ಮಾಡಿದ್ದಾರೆ. ಅವರ ಸಕ್ರಿಯ ಭಾಗವಹಿಸುವಿಕೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ಚುನಾವಣೆಗಾಗಿ ಭೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಮಹಿಳೆಯರು ಮತ್ತು ಯುವಕರು ಕಾಂಗ್ರೆಸ್‍ಅನ್ನು ಬೆಂಬಲಿಸಿದ್ದಾರೆ. ನಾನು ಮತದಾನದ ನಂತರ ಸಮೀಕ್ಷೆಗಳನ್ನು ಉಲ್ಲೇಖಿಸಿ ಹೇಳುತ್ತಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಜನಸಾಮಾನ್ಯರ ಮಾಹಿತಿ ಆಧರಿಸಿ ಹೇಳುತ್ತಿದ್ದೇನೆ. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದರು.
ಜಿಲ್ಲಾ ಪಂಚಾಯ್ತಿ ಮಟ್ಟಕ್ಕಿಳಿದ ಪ್ರಧಾನಿ:
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿಷಯಾಧಾರಿತ ಮತ್ತು ಟೀಕೆಗಳಿಗೆ ಒತ್ತು ಕೊಟ್ಟಿತ್ತು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಹುಲ್‍ಗಾಂಧಿ, ಸಿದ್ದರಾಮಯ್ಯ ಮತ್ತು ಇತರೆ ನಾಯಕರ ಮೇಲೆ ವೈಯಕ್ತಿಕ ಟೀಕೆಗಳನ್ನು ಮಾಡಿದರು.
ಜಿಪಂ ಮಟ್ಟದಲ್ಲೂ ಕೂಡ ಈ ರೀತಿಯ ಟೀಕೆಗಳು ಕೇಳಿ ಬರುವುದಿಲ್ಲ. ಪ್ರಧಾನಿಯಾಗಿದ್ದವರು ನೀತಿ, ಧೋರಣೆಗಳು, ರಾಷ್ಟ್ರದ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ವೈಯಕ್ತಿಕ ದಾಳಿಗೆ ಸಮಯ ಮೀಸಲಿಟ್ಟಿದ್ದು ದುರಂತ. ಅದರಲ್ಲೂ ವಿಶ್ವಮಾನ್ಯತೆ ಪಡೆದಿರುವ ಬೆಂಗಳೂರನ್ನು ಪಾಪದ ನಗರ ಎಂದು ಹೇಳಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ಅವರ ನಡವಳಿಕೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಲ್ಲೇ ಆಕ್ಷೇಪ ಕೇಳಿ ಬಂದಿದೆ. ಬಿಜೆಪಿಯ ಹಿರಿಯ ನಾಯಕ ಶತೃಘ್ನ ಸಿನ್ಹಾ ಮತ್ತು ಎನ್‍ಡಿಎ ಮಿತ್ರ ಪಕ್ಷವಾದ ಶಿವಸೇನೆಯ ಉದ್ದವ್ ಠಾಕ್ರೆ, ಪ್ರಧಾನಿ ಮೋದಿ ಅವರು ರಾಹುಲ್‍ಗಾಂಧಿ ಅವರನ್ನು ನೋಡಿ ಕಲಿಯಬೇಕಿದೆ ಎಂದು ಅಭಿಪ್ರಾಯ ಹೇಳಿದ್ದಾರೆ. ಮೋದಿ ಅವರು ಇದನ್ನು ಈಗಲಾದರೂ ಅರ್ಥ ಮಾಡಿಕೊಳ್ಳಲಿ ಎಂದರು.
ನಾವು ಜೆಡಿಎಸ್ ಬಗ್ಗೆ ಯಾವುದೇ ಮೃದು ಧೋರಣೆ ಅನುಸರಿಸಿಲ್ಲ. ವಿಷಯಾಧಾರಿತವಾಗಿ ಸಮಯ ಬಂದಾಗಲೆಲ್ಲಾ ಟೀಕೆ ಮಾಡಿದ್ದೇವೆ. ವೈಯಕ್ತಿಕ ದಾಳಿಗಳನ್ನು ಮಾಡಿಲ್ಲ. ದೇವೇಗೌಡರಂತಹ ಅನುಭವಿ ರಾಜಕಾರಣಿಯನ್ನು ವೈಯಕ್ತಿಕವಾಗಿ ಟೀಕಿಸುವುದು ಸರಿಯಲ್ಲ. ಹಾಗಾಗಿ ನಾವು ದೇವೇಗೌಡರು ಮತ್ತು ಕುಮಾರಸ್ವಾಮಿ ಬಗ್ಗೆ ವಿಷಾಯಾಧಾರಿತವಾಗಿ ಮಾತನಾಡಿದ್ದೇವೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಚುನಾವಣೆಯಲ್ಲಿ ಕೆಲಸ ಮಾಡಿದ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತ ಹಾಕಿದ ನಾಗರಿಕರಿಗೆ ಪರಮೇಶ್ವರ್ ಅಭಿನಂದನೆ ಸಲ್ಲಿಸಿದರು.