ಸಿಯೋಲ್, ಮೇ 13-ಅಮೆರಿಕ ಜೊತೆ ಐತಿಹಾಸಿಕ ಶೃಂಗಸಭೆಗೂ ಮುನ್ನವೇ ಈ ತಿಂಗಳಾಂತ್ಯದಲ್ಲಿ ತನ್ನ ಅಣ್ವಸ್ತ್ರ ಪರೀಕ್ಷಾ ನೆಲೆಯನ್ನು ಉತ್ತರ ಕೊರಿಯಾ ನಾಶಪಡಿಸಲಿದೆ. ಅಲ್ಲದೇ ವಿದೇಶಿ ಮಾಧ್ಯಮಗಳ ಮುಂದೆ ತನ್ನ ಸುರಂಗ ಮಾರ್ಗಗಳನ್ನೂ ಸ್ಫೋಟಿಸಿ ನಿರ್ನಾಮ ಮಾಡಲಿದೆ. ಈ ಸಂಗತಿಯನ್ನು ಉತ್ತರ ಕೊರಿಯಾ ಖಚಿತಪಡಿಸಿದೆ.
ಉತ್ತರ ಕೊರಿಯಾದ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದಾರೆ. ಮೇ 23-25ರ ನಡುವೆ ಪುನ್ಗ್ಯೀ-ರಿ ಪ್ರದೇಶದಲ್ಲಿರುವ ತನ್ನ ಅಣ್ವಸ್ತ್ರ ಪರೀಕ್ಷಾ ನೆಲೆಯನ್ನು ನಾಶಗೊಳಿಸುವುದಾಗಿ ಪಯೊಂಗ್ಯಾಂಗ್ ಕೈಗೊಂಡಿರುವ ತೀರ್ಮಾನ ಪ್ರಶಂಸಾರ್ಹ. ಇದು ಅಧ್ಯಕ್ಷ ಕಿನ್ ಜಾಂಗ್ ಉನ್ ಅವರ ದಿಟ್ಟ ಮತ್ತು ಸಮರ್ಥ ಕ್ರಮ ಎಂದು ಟ್ರಂಪ್ ಬಣ್ಣಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್ ಧನ್ಯವಾದಗಳು, ತುಂಬಾ ಬುದ್ಧಿವಂತಿಕೆ ಮತ್ತು ಸದ್ಭಾವದ ಕ್ರಮ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಜೂನ್ 12ರಂದು ಸಿಂಗಪುರ್ನಲ್ಲಿ ಟ್ರಂಪ್ ಮತ್ತು ಕಿಮ್ ನಡುವೆ ನಡೆಯಲಿರುವ ಐತಿಹಾಸಿಕ ಭೇಟಿ ಇಡೀ ವಿಶ್ವದ ಕುತೂಹಲ ಕೆರಳಿಸಿದೆ.