ಮುಂಬೈ, ಮೇ 13-ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರಿಗೆ ಧಾರ್ಮಿಕ ಗುರು ವಿದ್ಯಾ ನರಸಿಂಹ ಭಾರತಿ ಸ್ವಾಮೀಜಿ(ಜಗದ್ಗುರು ಶಂಕರಾಚಾರ್ಯ) ಅವರು ಸ್ವರ ಮೌಳಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಮುಂಬೈನ ಪ್ರಭು ಕುಂಜ್ನಲ್ಲಿರುವ ಲತಾ ಅವರ ಮನೆಗೆ ನಿನ್ನೆ ತೆರಳಿದ ಸ್ವಾಮಿ ಈ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಿದರು. ಲತಾ ಅವರ ಸಹೋದರಿ ಆಶಾ ಭೋಸ್ಲೆ, ಗಾಯಕಿ ಉಷಾ ಮಂಗೇಶ್ಕರ್ ಮತ್ತು ಸಹೋದರ ಹೃದಯನಾಥ್ ಮಂಗೇಶ್ಕರ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಶ್ವೇತ ಸೀರೆಯಲ್ಲಿ ಸದಾ ಹಸನ್ಮುಖಿಯಾಗಿರುವ ಲತಾ ಈ ಪ್ರಶಸ್ತಿಯನ್ನು ತಮಗೆ ಪ್ರದಾನ ಮಾಡಿರುವುದಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಜಗದ್ಗುರು ಶಂಕರಾಚಾರ್ಯ ರ ಪ್ರಶಸ್ತಿಗೆ ನನ್ನ ಹೆಸರನ್ನು ಆಯ್ಕೆ ಮಾಡಿದ್ದೇ ಅಲ್ಲದೇ ಖುದ್ದಾಗಿ ನನ್ನ ಮನಗೆ ಬಂದು ಪುರಸ್ಕಾರ ನೀಡಿ ಆಶೀರ್ವದಿಸಿದ್ದಾರೆ. ಅದಕ್ಕಾಗಿ ಅವರಿಗೆ ನಾನು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ಲತಾ ಹೇಳಿದರು.
ಮಾಧುರ್ಯ ಲೋಕದ ಸಾಮ್ರಾಜ್ಞಿ ಆರು ದಶಕಗಳಿಂದಲೂ ಹೆಚ್ಚು ಕಾಲ ಗಾಯನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯ-ಅಮೂಲ್ಯ. ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳಿಗೆ ಲತಾ ಪಾತ್ರರಾಗಿದ್ದಾರೆ.