ಬೆಂಗಳೂರು, ಮೇ 13- ಶೇಮ್… ಶೇಮ್… ಬೇಜವಾಬ್ದಾರಿ ಬೆಂಗಳೂರಿಗರೇ…
ಏನೇ ಸವಲತ್ತು ಒದಗಿಸಿದರೂ ವಿದ್ಯಾವಂತರು, ಬುದ್ಧಿವಂತರು, ಹೈಟೆಕ್ ಮಂದಿ ಎಂದು ಗುರುತಿಸಿಕೊಂಡಿರುವ ಬೆಂಗಳೂರಿಗರು ಮಾತ್ರ ಮತದಾನ ಮಾಡಲು ಮುಂದೆ ಬಾರದೆ ತಾವು ಬೇಜವಾಬ್ದಾರಿ ನಾಗರಿಕರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿಕೊಂಡಿದ್ದಾರೆ.
ಕಳೆದ 2013ರ ಚುನಾವಣೆಯಲ್ಲಿ ನಗರದಲ್ಲಿ ಸರಿಸುಮಾರು ಶೇ.57ರಷ್ಟು ಮತದಾನವಾಗಿತ್ತು. ಪ್ರಜ್ಞಾವಂತ ನಾಗರಿಕರ ಈ ಮನೋಧೋರಣೆಯನ್ನು ಬದಲಾಯಿಸಬೇಕು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಹಲವಾರು ತಂತ್ರಗಳಿಗೆ ಮೊರೆ ಹೋಗಿತ್ತು.
ನಗರದ ಮಂದಿ ಬಿಸಿಲಿನಲ್ಲಿ ಕ್ಯೂ ನಿಲ್ಲುವುದಿಲ್ಲ, ಮತಗಟ್ಟೆಯ ವಿಳಾಸ ಹುಡುಕಲು ಮನಸ್ಸು ಮಾಡುವುದಿಲ್ಲ ಎಂಬುದನ್ನು ಅರಿತ ಜಿಲ್ಲಾ ಚುನಾವಣಾಧಿಕಾರಿಗಳು ಹೈಟೆಕ್ ಸಿಟಿಯ ಜನತೆ ನೆರವಿಗೆ 4 ಆ್ಯಪ್ಗಳನ್ನು ಪರಿಚಯಿಸಿದ್ದರು.
ನಗರವಾಸಿಗಳು ಕುಳಿತಲ್ಲಿಯೇ ತಮ್ಮ ಮೊಬೈಲ್ ಬಳಸಿ ತಾವು ಮತದಾನ ಮಾಡುವ ಕೇಂದ್ರ ಯಾವುದು, ಅಲ್ಲಿಗೆ ತೆರಳುವ ಸುಲಭ ಮಾರ್ಗ ಯಾವುದು, ತಾವು ಮತ ಚಲಾಯಿಸುವ ಮತಗಟ್ಟೆಯಲ್ಲಿ ಜನಸಂದಣಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದಿತ್ತು. ಇದರ ಜತೆಗೆ ಬುದ್ಧಿವಂತ ಜನರಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ನಾನಾ ಕಸರತ್ತು ನಡೆಸಲಾಗಿತ್ತು.
ಇದೆಲ್ಲದರ ಪರಿಣಾಮ ಈ ಬಾರಿ ನಗರದಲ್ಲಿ ದಾಖಲೆ ಫಲಿತಾಂಶ ಬರಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈ ಭಾವನೆ ತಪ್ಪಾಗಿದ್ದು, ಈ ಬಾರಿ ಶೇ.50.41ರಷ್ಟು ಕಡಿಮೆ ಮತದಾನವಾಗುವ ಮೂಲಕ ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮೆ ಮತದಾನವಾದ ನಗರ ಎಂಬ ಕುಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ.
ಮೋಜು-ಮಸ್ತಿಗೆ ತೆರಳಿದರು: ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ನಾನಾ ಕಸರತ್ತುಗಳನ್ನು ನಡೆಸಿದ ಪರಿಣಾಮ ದಾಖಲೆ ಮತದಾನವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮತದಾನ ನಡೆದ ದಿನವೇ ಮೈಸೂರು, ತುಮಕೂರು, ಹೊಸೂರು ಮಾರ್ಗಗಳಲ್ಲಿ ವಾಹನ ಸಂದಣಿ ಹೆಚ್ಚಾಗಿದ್ದಾಗಲೇ ಈ ಬಾರಿಯೂ ಮತದಾನ ಹೆಚ್ಚಳವಾಗುವ ಸಾಧ್ಯತೆ ಇಲ್ಲ ಎಂಬುದು ಖಚಿತಪಟ್ಟಿತ್ತು.
ಆದರೂ ಚುನಾವಣಾ ಆಯೋಗ ಮಾಧ್ಯಮಗಳ ಮೂಲಕ ಮನೆ ಬಿಟ್ಟು ಮತಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿ ಎಂದು ಬೊಬ್ಬೆ ಹೊಡೆದುಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ.
ಊರಿಗೂರೇ ಹಾಳಾದರೆ ನಮಗೇನಂತೆ ಎಂಬ ಮನೋಭಾವನೆ ಹೊಂದಿರುವ ಬೆಂಗಳೂರಿನ ಹೈಟೆಕ್ ಮಂದಿ ತಮ್ಮ ವೀಕೆಂಡ್ ಮೋಜು-ಮಸ್ತಿಯಿಂದ ಮಾತ್ರ ವಿಮುಖರಾಗದಿರುವುದು ಈ ನಾಡಿನ ದುರಂತವೇ ಸರಿ.
ಪ್ರಜಾಪ್ರಭುತ್ವದ ಹಬ್ಬ ಎಂದೇ ಬಿಂಬಿಸಲಾಗುವ ಮತದಾನದ ದಿನವೂ ಹೈಟೆಕ್ ಮಂದಿ ತಮ್ಮ ಹಕ್ಕು ಮರೆತು ಕುಟುಂಬದೊಂದಿಗೆ ಮೋಜು-ಮಸ್ತಿಗೆ ತೆರಳಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಗ್ರಾಮೀಣರೇ ಮೇಲು: ಮತದಾನವನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಭಾವಿಸಿರುವುದು ಗ್ರಾಮೀಣ ಜನರೇ ಎಂಬುದು ಈ ಬಾರಿಯೂ ಸಾಬೀತಾಗಿದೆ.
ವಯಸ್ಸಾದವರು, ಹಿರಿಯರು, ವಿಶೇಷಚೇತನರು ಸೇರಿದಂತೆ ಗ್ರಾಮೀಣ ಪ್ರದೇಶದ ಮಂದಿ ಮತಕೇಂದ್ರಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದ ಪರಿಣಾಮ ಆ ಭಾಗದಲ್ಲಿ ದಾಖಲೆಯ ಮತದಾನವಾಗಿದೆ.
ಅನಕ್ಷರಸ್ಥರಾದ ಗ್ರಾಮೀಣ ಪ್ರದೇಶದ ಜನರು ತಮ್ಮ ಹಕ್ಕಿನ ಬಗ್ಗೆ ತಿಳಿದುಕೊಂಡಿದ್ದಾರೆ. ಆದರೆ, ಇಡೀ ವಿಶ್ವವನ್ನೇ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿರುವ ಬೆಂಗಳೂರಿನ ಹೈಟೆಕ್ ಮಂದಿಗೆ ಈ ಸಣ್ಣ ವಿಚಾರ ತಲೆಗೆ ಹೋಗದಿರುವುದು ಅವರು ಇನ್ಯಾವ ಸೀಮೆ ಬುದ್ಧಿವಂತ ಜನ ಎಂದು ಪ್ರಶ್ನಿಸುವಂತಾಗಿದೆ.
ಇವರನ್ನು ನೋಡಿ ಕಲಿಯಿರಿ: 111ನೆ ವಸಂತಕ್ಕೆ ಕಾಲಿರಿಸಿರುವ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಕಳೆದ 1952ರಿಂದ ಇಲ್ಲಿಯವರೆಗೂ ಒಂದೇ ಒಂದು ಬಾರಿಯೂ ಮತದಾನದಿಂದ ತಪ್ಪಿಸಿಕೊಂಡಿಲ್ಲ.
ಮತದಾನವನ್ನು ಶಿವನ ಕಾಯಕವೆಂದೇ ಭಾವಿಸಿರುವ ಶ್ರೀಗಳು ನಿರಂತರವಾಗಿ ಮತದಾನ ಮಾಡಿಕೊಂಡು ಬಂದಿದ್ದಾರೆ. 111ನೆ ಇಳಿ ವಯಸ್ಸಿನಲ್ಲಿ ಅವರು ಮತಕೇಂದ್ರಕ್ಕೆ ಬಂದು ಮತ ಚಲಾಯಿಸುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ನಿಶ್ಯಕ್ತಿ ಹೊಂದಿದ್ದರೂ ಕಿರಿಯ ಶ್ರೀಗಳ ಸಹಾಯದೊಂದಿಗೆ ಮತಕೇಂದ್ರಕ್ಕೆ ಬಂದ ಸಿದ್ಧಗಂಗಾ ಶ್ರೀಗಳು ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದಿದ್ದಾರೆ.
ಇದೇ ರೀತಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯದ ಹಲವಾರು ಹಿರಿಯ ಮಠಗಳ ಮಠಾಧೀಶರು, ಚಿತ್ರರಂಗದ ಗಣ್ಯರು, ಸಾಹಿತಿಗಳು, ವಿಶೇಷಚೇತನರು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಕೂಡ ಮತದಾನದ ಮಹತ್ವ ಅರಿತು ಸಾಮಾನ್ಯ ಜನರಂತೆ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಮುಂದಾದರೂ ಇಂತಹ ಮಹಾನ್ ವ್ಯಕ್ತಿಗಳನ್ನು ನೋಡಿ ಬೆಂಗಳೂರಿನ ಹೈಟೆಕ್ ಮಂದಿ ತಮ್ಮ ಲೋಟೆಕ್ ಯೋಚನೆಗಳನ್ನು ಬದಿಗೊತ್ತಿ ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳುವರೇ ಮತ್ತೊಮ್ಮೆ ಕಾದು ನೋಡಬೇಕಿದೆ.