
ಬೆಂಗಳೂರು, ಮೇ 13- ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ… ಸರ್ಕಾರ ಯಾರು ರಚಿಸುತ್ತಾರೆಂಬ ಚರ್ಚೆಗಳು ಜನರ ಬಾಯಲ್ಲಿ ಹರಿದಾಡುತ್ತಿದ್ದು, ಕುತೂಹಲ ಕೆರಳಿಸಿದೆ.
ದೇಶದಾದ್ಯಂತ ನಿರೀಕ್ಷಿಸುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಕೇವಲ 48 ಗಂಟೆ ಬಾಕಿ ಇದ್ದು, ಅಭ್ಯರ್ಥಿಗಳ ಎದೆಬಡಿತ ದ್ವಿಗುಣಗೊಂಡಿದ್ದರೆ, ಮತ್ತೊಂದೆಡೆ ಅವರ ಬೆಂಬಲಿಗರಲ್ಲೂ ಹಲವು ರೀತಿಯ ಲೆಕ್ಕಾಚಾರಗಳು ಶುರುವಾಗಿವೆ.
ಅಚ್ಚರಿ ಎಂಬಂತೆ ಈ ಬಾರಿ ಚುನಾವಣೆ ಯಾವುದೇ ಸದ್ದುಗದ್ದಲವಿಲ್ಲದೆ ವ್ಯವಸ್ಥಿತವಾಗಿ ನಡೆದಿದ್ದು, ಹಿಂದಿನ ಚುನಾವಣೆಗೆ ಹೋಲಿಸಿದರೆ ಅತಿ ಹೆಚ್ಚು ಜನ ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಅಂಕಿ-ಅಂಶಗಳನ್ನು ನೋಡುವುದಾದರೆ ಕಳೆದ ಬಾರಿ 2013ರಲ್ಲಿ 4,36,85,739 ಅರ್ಹ ಮತದಾರರಲ್ಲಿ 3,13,52,454 ಮಂದಿ ಮತ ಚಲಾಯಿಸಿದ್ದರು.
ಕಾಂಗ್ರೆಸ್ ಶೇ.36.6, ಜೆಡಿಎಸ್ ಶೇ.20.2 ಮತ್ತು ಬಿಜೆಪಿ 19.9 ಮತಗಳನ್ನು ಪಡೆದಿದ್ದರೆ, ಕೆಜೆಪಿ ಶೇ.10ರಷ್ಟು ಮತ ಗಳಿಸಿತ್ತು.
ಈ ಬಾರಿ ಒಟ್ಟಾರೆ 5,06,90,538 ಅರ್ಹ ಮತದಾರರಿದ್ದು, 70 ಲಕ್ಷಕ್ಕೂ ಹೆಚ್ಚು ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಮತದಾನವಾದ ಪ್ರಕಾರ ಶೇ. ಶೇ.72.13ರಷ್ಟು ಅಂದರೆ ಸುಮಾರು 4 ಕೋಟಿ ಆಸುಪಾಸಿನವರೆಗೂ ಮತದಾನವಾಗಿದೆ.
ಕಳೆದ ಬಾರಿಗಿಂತ ಸರಿಸುಮಾರು ಶೇ.2ರಷ್ಟು ಹೆಚ್ಚಿನ ಮತದಾನವಾಗಿದ್ದು, ಯಾರ ಪರವಾಗಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇದು ನಿರ್ಣಾಯಕವಾಗುವ ಸಾಧ್ಯತೆಯಿದ್ದು, ಗೆಲುವಿನ ಲೆಕ್ಕಾಚಾರವನ್ನು ಕೂಡ ತಲೆಕೆಳಗು ಮಾಡಬಲ್ಲ ಸಾಧ್ಯತೆಯಿದೆ.
ರಾಜ್ಯದ ಹಲವೆಡೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಮತಕ್ಷೇತ್ರಗಳಿದ್ದು, ಗೆಲುವಿನ ಅಂತರಗಳು ಒಂದು ಸಾವಿರದಿಂದ ಐದು ಸಾವಿರದೊಳಗೆ ಇರುವ ಸಾಧ್ಯತೆಗಳಿವೆ ಎಂದು ಲೆಕ್ಕಾಚಾರ ಹಾಕಲಾಗಿದೆ.