ಪ್ರಾಮಾಣಿಕ, ನಿಸ್ವಾರ್ಥ, ಸಕ್ರಿಯ ರಾಜಕಾರಣಿಗಳು ಬರುವವರೆಗೂ ನಮ್ಮ ಕನಸಿನ ಭವ್ಯ ನಾಡು ಆಗಲು ಸಾಧ್ಯವಿಲ್ಲ: ಕೇಂದ್ರ ಸಚಿವ ಅನಂತ್‍ಕುಮಾರ್

 

ಬೆಂಗಳೂರು, ಮೇ 13- ಎಲ್ಲಿಯವರೆಗೆ ಪ್ರಾಮಾಣಿಕ, ನಿಸ್ವಾರ್ಥ, ಸಕ್ರಿಯ ರಾಜಕಾರಣಿಗಳು ಬರುವುದಿಲ್ಲವೋ ಅಲ್ಲಿಯ ತನಕ ನಮ್ಮ ಕನಸಿನ ಭವ್ಯ ನಾಡು ಆಗಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೇಳಿದರು.
ಅದಮ್ಯ ಚೇತನ ಸಂಸ್ಥೆಯು ಹಸಿರು ಭಾನುವಾರದಂದು ಇತ್ತೀಚೆಗೆ ನಿಧನರಾದ ಜಯನಗರ ಶಾಸಕ ಬಿ.ಎನ್.ವಿಜಯಕುಮಾರ್ ಅವರ ನೆನಪಿನಲ್ಲಿ ಗಿಡಗಳನ್ನು ನೆಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

600 ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರು ಮಳೆನೀರು ಕೊಯ್ಲು ಅನುಸರಿಸಿದ್ದರು. ಬೆಂಗಳೂರಿನ ಸುತ್ತಮುತ್ತ ಕೆರೆ-ಕಟ್ಟೆಗಳನ್ನು ಕಟ್ಟಿ ಮಳೆ ನೀರು ಪೆÇೀಲಾಗದಂತೆ ಮಾಡಿದ್ದರು. ಅಂತಹ ಬೆಂಗಳೂರನ್ನು ನಾವು ಇಂದು ಮರೆತು ಕಾಂಕ್ರಿಟ್ ಕಾಡು ಮಾಡಿ ಹಾಳುಗೆಡವಿದ್ದೇವೆ ಎಂದು ವಿಷಾದಿಸಿದರು.
ವಿಜಯಕುಮಾರ್ ಅವರು ಪ್ರಾಮಾಣಿಕ, ಭವ್ಯ ಬೆಂಗಳೂರಿನ ಕನಸು ಕಟ್ಟಿದ್ದ ರಾಜಕಾರಣಿಯಾಗಿದ್ದರು. ನಾಡಪ್ರಭು ಕೆಂಪೇಗೌಡರ ಹಾದಿಯನ್ನು ಅವರು ಅನುಸರಿಸಿದ್ದರು. ಬೆಂಗಳೂರಿನಲ್ಲಿ ಶುದ್ಧ ಗಾಳಿ, ಶುದ್ಧ ನೀರು ಬೇಕೆಂಬುದನ್ನು ಮನದಲ್ಲಿಟ್ಟುಕೊಂಡು ಅವರು ಕೆಲಸ ಮಾಡಿದ್ದರು ಎಂದರು.
ಜಯನಗರದಲ್ಲಿ ಮೂರು ಸಾವಿರ ಬಡ ಜನರಿಗೆ ಮನೆಕಟ್ಟಿಕೊಟ್ಟಿದ್ದಾರೆ. ಅತಿ ದೊಡ್ಡ ಮಟ್ಟದಲ್ಲಿ ಉದ್ಯಾನವನಗಳನ್ನು ನಿರ್ಮಿಸಿ ಶುದ್ಧ ಗಾಳಿ ಸಿಗುವಂತೆ ಮಾಡಿದ್ದಾರೆ. ವಿಜಯಕುಮಾರ್ ಅವರಂತಹ ಸಜ್ಜನ ರಾಜಕಾರಣಿ ಮತ್ತೆ ಹುಟ್ಟಿ ಬರಬೇಕು ಎಂದು ಆಶಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಕುರುಡು ಕಾಂಚಾಣ ಕುಣಿಸಿದೆ…. ಗೀತೆಯನ್ನು ನೆನಪು ಮಾಡಿಕೊಂಡ ಅನಂತಕುಮಾರ್, ಚುನಾವಣೆ ವೇಳೆ ಬೆಂಗಳೂರು ಸೇರಿದಂತೆ ಎಲ್ಲೆಡೆ ಹಣದ ದುರುಪಯೋಗವಾಗಿದೆ. ಇಂತಹುದು ನಮ್ಮೆಲ್ಲರ ಕಣ್ಣು ತೆರೆಸುವ ಘಟನೆ ಎಂದರು.
ಮತದಾನದ ಬಗ್ಗೆ ಬೆಂಗಳೂರಿನ ಜನರು ನಿರಾಸಕ್ತಿ ತೋರಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಇನ್ನು ಮುಂದಾದರೂ ಬೆಂಗಳೂರಿಗರು ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.

ವಿಜಯಕುಮಾರ್ ಅವರು ಸಾರಕ್ಕಿಯಲ್ಲಿ ಬಡವರಿಗಾಗಿ ಡಯಾಲಿಸಿಸ್ ಕೇಂದ್ರ ತೆರೆಯಲು ಇಚ್ಚಿಸಿದ್ದರು. ಗ್ರಂಥಾಲಯಗಳನ್ನು ಸ್ಥಾಪಿಸಿ ಜನರನ್ನು ಓದಿನತ್ತ ತಿರುಗುವಂತೆ ಮಾಡಿದ್ದರು. ಉದ್ಯಾನವನಗಳನ್ನು ಬಹಳಷ್ಟು ಮಾಡಿ ಉತ್ತಮ ಪರಿಸರ ನಿರ್ಮಾಣ ಮಾಡಿದ್ದಾರೆ. ನಾವು ಇವುಗಳನ್ನೆಲ್ಲಾ ಮುಂದುವರೆಸಿಕೊಂಡು ಹೋದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದೇ ಅವರಿಗೆ ನಾವುಗಳು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಹೇಳಿದರು.
ನಾವೂ ಸೇರಿದಂತೆ ರಾಜಕಾರಣಿಗಳು ವಿಜಯಕುಮಾರ್ ಅವರ ಒಂದೆರಡು ಪಾಠಗಳನ್ನು ಅನುಸರಿಸಬೇಕು. ಅವರ ಪ್ರಾಮಾಣಿಕ, ನಿಸ್ವಾರ್ಥತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅನಂತ್‍ಕುಮಾರ್ ತಿಳಿಸಿದರು.
ಅದಮ್ಯ ಚೇತನದ ಮುಖ್ಯಸ್ಥರಾದ ತೇಜಸ್ವಿನಿ ಅನಂತ್‍ಕುಮಾರ್, ಬಿಬಿಎಂಪಿ ಸದಸ್ಯೆ ಲಕ್ಷ್ಮಿ, ಎಚ್.ಎನ್.ಎ.ಪ್ರಸಾದ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ