ಕಲಬುರಗಿ, ಮೇ 13-ಚುನಾವಣಾ ಸಮೀಕ್ಷೆಗಳೆಲ್ಲವೂ ಸುಳ್ಳು. ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯೂ ಇಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದೇ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತದೆ. 120ಕ್ಕೂ ಹೆಚ್ಚು ಸ್ಥಾನಗಳಿಸಲಿದ್ದೇವೆ. ಅತಂತ್ರ ಸ್ಥಿತಿಯಂತೂ ನಿರ್ಮಾಣವಾಗುವುದಿಲ್ಲ ಎಂದು ಭವಿಷ್ಯ ನುಡಿದರು. ಸಮೀಕ್ಷೆಗಳೆಲ್ಲವೂ ಸುಳ್ಳಾಗಲಿದೆ. ಅದರ ಬಗ್ಗೆ ನಂಬಿಕೆಯೂ ಇಲ್ಲ ಎಂದ ಅವರು, ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಾನು ಯಾವುದೇ ರೀತಿಯಲ್ಲಿ ಕಮೆಂಟ್ ಮಾಡುವುದಿಲ್ಲ. ಹೈಕಮಾಂಡ್ ಅದನ್ನು ನಿರ್ಧರಿಸುತ್ತಾರೆ ಎಂದರು.
ಆ್ಯನಿವರ್ಸರಿ ಮೂಡ್ನಲ್ಲಿ ಖರ್ಗೆ:
ಚುನಾವಣೆ ನಂತರ ರಿಲ್ಯಾಕ್ಸ್ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕುಟುಂಬದೊಂದಿಗೆ ತಮ್ಮ ಮದುವೆ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿದ್ದರು.
50ನೆ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಕಲಬುರಗಿಯ ಲುಂಬಿನಿ ನಿವಾಸದಲ್ಲಿ ಪತ್ನಿ ರಾಧಾಬಾಯಿ ಅವರೊಂದಿಗೆ ಆಚರಿಸಿಕೊಂಡರು. ಪುತ್ರ ಪ್ರಿಯಾಂಕ್ಖರ್ಗೆ,ಅಫ್ಜಲ್ಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ.ಪಾಟೀಲ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.