
ಬೆಂಗಳೂರು:ಮೇ-13: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಮಾತೇ ಇಲ್ಲ; ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆಯ ಕುರಿತು ಚರ್ಚೆ ನಡೆಯುತ್ತಿರುವ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅತಂತ್ರ ವಿಧಾನಸಭೆಯನ್ನು ಅಲ್ಲ ಗಳೆದಿದ್ದಾರೆ.
ಟ್ವಿಟರ್ ನಲ್ಲಿ ಬರೆದಿರುವ ಸಿಎಂ ಸಿದ್ದರಾಮಯ್ಯ, ‘ಕಾಂಗ್ರೆಸ್ ಪಕ್ಷದ ಪ್ರೀತಿಯ ಕಾರ್ಯಕರ್ತರೆ ಮತ್ತು ಹಿತಚಿಂತಕರೆ,ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನೀವು ನನ್ನಂತೆಯೇ ದಣಿದಿದ್ದೀರಿ ಎಂದು ಗೊತ್ತು. Exit Poll ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಆರಾಮವಾಗಿರಿ, ಕುಟುಂಬದ ಜತೆ ಕಾಲ ಕಳೆಯಿರಿ. ಮೇ ೧೫ರಂದು ಸಿಗೋಣ. ಹಿರಿಯರ ಆಶೀರ್ವಾದ ಮತ್ತು ಕಿರಿಯರ ಹಾರೈಕೆಯಿಂದ ಒಳ್ಳೆಯದೇ ಆಗುತ್ತದೆ. ಕಳೆದ 5 ವರ್ಷಗಳ ನಮ್ಮ ಅಭಿವೃದ್ಧಿಪರ ಆಡಳಿತ ಹಾಗೂ ರಾಜ್ಯದ ಬಗೆಗಿನ ನಮ್ಮ ಮುನ್ನೋಟದ ಮೇಲೆ ನಾವು ಈ ಬಾರಿಯ ಚುನಾವಣೆಯನ್ನು ಎದುರಿಸಿದ್ದೇವೆ. ರಾಜ್ಯದ ಜನತೆ ಮತ್ತೊಮ್ಮೆ ತಮ್ಮ ಸೇವೆ ಮಾಡುವ ಭಾಗ್ಯ ನೀಡಲಿದ್ದಾರೆ ಎಂಬ ಭರವಸೆಯಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ‘ಪ್ರೀತಿಯ ಕನ್ನಡಿಗರೇ, ತಾವು ಮತದಾನದ ಮೂಲಕ ತಮ್ಮ ಕರ್ತವ್ಯ ಮೆರದುದ್ದಕ್ಕಾಗಿ ಧನ್ಯವಾದಗಳು. ತಮ್ಮಪ್ರಾಮಾಣಿಕ ಹಾಗೂ ಪರಿಶ್ರಮದ ಮೂಲಕ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೂ ಧನ್ಯವಾದಗಳು. ಸತತ ಪರಿಶ್ರಮದೊಂದಿಗೆ ನಮ್ಮೊಂದಿಗೆ ದುಡಿದ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಿಗೂ ನಾನು ಚಿರಋಣಿ’ ಎಂದು ಹೇಳಿದ್ದಾರೆ.
ಇನ್ನು ನಿನ್ನೆ ನಡೆದ ಮತದಾನ ಪ್ರಕ್ರಿಯೆಲ್ಲಿ ಶೇ.70ರಷ್ಟು ಮತದಾನವಾಗಿತ್ತು.