ಬೆಂಗಳೂರು, ಮೇ 12- ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಶ್ರೀರಾಮುಲು ಅವರ ಮತಗಳು ಎರಡೂ ಕ್ಷೇತ್ರಗಳಲ್ಲಿ ಇಲ್ಲದಿರುವುದು ವಿಪರ್ಯಾಸ.
ಬಾದಾಮಿ, ಚಾಮುಂಡೇಶ್ವರಿ ಎರಡೂ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ತಮ್ಮ ಮತ ಇಲ್ಲ. ತಮ್ಮ ಮತವನ್ನು ತಾವೇ ಹಾಕಿಕೊಳ್ಳಲು ಅವರಿಗೆ ಅವಕಾಶವಿಲ್ಲ. ಅವರ ಮತ ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಇದೆ. ಅವರು ಅಲ್ಲಿ ಮತ ಚಲಾಯಿಸಿದರು.
ಅದೇ ರೀತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಆದರೆ, ಅವರ ಮತ ಮಾಗಡಿ ಕ್ಷೇತ್ರದ ಬಿಡದಿಯ ಕೇತಗಾನಹಳ್ಳಿಯಲ್ಲಿದೆ. ಅವರು ಅಲ್ಲಿ ಮತ ಚಲಾಯಿಸಿದರು. ಅವರು ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲಿ ತಮ್ಮ ಮತವನ್ನು ತಾವು ಚಲಾಯಿಸಿಕೊಳ್ಳುವಂತಿಲ್ಲ.
ಶ್ರೀರಾಮುಲು ಕೂಡ ಬಾದಾಮಿ ಹಾಗೂ ಮೊಳಕಾಲ್ಮೂರು ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಅವರ ಮತ ಇಲ್ಲ. ಅವರ ಮತ ಇರುವುದು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ. ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಬಾದಾಮಿ ಹಾಗೂ ಮೊಣಕಾಲ್ಮೂರಿನಲ್ಲಿ ಶ್ರೀರಾಮುಲು ಅವರ ಮತ ಇಲ್ಲ. ಅವರು ತಮ್ಮ ಸ್ವಕ್ಷೇತ್ರ ಬಳ್ಳಾರಿ ಗ್ರಾಮೀಣದಲ್ಲಿ ಮತ ಚಲಾಯಿಸಿದರು.
ಬಾದಾಮಿ, ಚಾಮುಂಡೇಶ್ವರಿ, ಚನ್ನಪಟ್ಟಣ ಹೈ ವೋಲ್ಟೇಜ್ ಕ್ಷೇತ್ರಗಳಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಾದಾಮಿಯಲ್ಲಿ ಶ್ರೀರಾಮುಲು ಪೈಪೆÇೀಟಿ ನೀಡಿದರೆ, ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡ ಅವರು ತೀವ್ರ ಸ್ಪರ್ಧೆಯೊಡ್ಡಿದ್ದಾರೆ.
ಅದೇ ರೀತಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರಿಗೆ ಯೋಗೇಶ್ವರ್ ಅವರು ಪ್ರಬಲ ಸ್ಪರ್ಧಿಯಾಗಿದ್ದಾರೆ.
ಈ ಮೂರೂ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆದಿದೆ. ಮೇ 15ರಂದು ಫಲಿತಾಂಶ ಹೊರಬೀಳಲಿದ್ದು, ಮತದಾರ ಯಾರ ಕೈ ಹಿಡಿದಿದ್ದಾನೆಂಬುದು ಅಂದು ಗೊತ್ತಾಗಲಿದೆ.