ಬೆಂಗಳೂರು, ಮೇ 12- ಮೂಲಭೂತ ಸೌಲಭ್ಯ, ಮತಯಂತ್ರಗಳ ದೋಷ ಸೇರಿದಂತೆ ಮತ್ತಿತರರ ಕಾರಣಗಳಿಂದ ರಾಜ್ಯದ ವಿವಿಧ ಗ್ರಾಮಗಳಲ್ಲಿ ಇಂದು ಮತದಾರರು ಮತದಾನ ಬಹಿಷ್ಕರಿಸಿದ ಘಟನೆಗಳು ವರದಿಯಾಗಿವೆ.
ಮೈಸೂರು: ಮೈಸೂರಿನ ಹರಿನಹಳ್ಳಿಗೆ ಜನಪ್ರತಿನಿಧಿಗಳು ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಮತದಾರರು ಮತದಾನ ಬಹಿಷ್ಕರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗುಡಿಬಂಡೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಹುಲ್ಲೂಡು ಪಂಚಾಯಿತಿಯ ರೂರಲ್ ಗುಡಿಬಂಡೆ ಮತಗಟ್ಟೆ ಸಂಖ್ಯೆ 229ರಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.
ನಮ್ಮ ಗ್ರಾಮಕ್ಕೆ ಜನಪ್ರತಿನಿಧಿಗಳು ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆಯನ್ನಂತೂ ಕೇಳುವವರಿಲ್ಲ. ಚುನಾವಣೆ ಬಂದಾಗ ಜನಪ್ರತಿನಿಧಿಗಳು ಕೈಯನ್ನೂ ಹಿಡಿಯುತ್ತಾರೆ, ಕಾಲನ್ನೂ ಹಿಡಿಯುತ್ತಾರೆ. ಗೆದ್ದ ಮೇಲೆ ಈ ಕಡೆ ತಲೆನೇ ಹಾಕಲ್ಲ. ಹಾಗಾಗಿ ಈ ಬಾರಿ ನಾವು ಮತದಾನವನ್ನು ಬಹಿಷ್ಕರಿಸಿದ್ದೇವೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಡಿಬಂಡೆ ತಾಲೂಕಿನ ಹೊನ್ನುಡು ಪಂಚಾಯ್ತಿಯ ಮತಕೇಂದ್ರದಲ್ಲಿ ವಿವಿ ಪ್ಯಾಟ್ ತಾಂತ್ರಿಕ ದೋಷದಿಂದ ಮತದಾನವನ್ನು ಬಹಿಷ್ಕರಿಸಲಾಗಿದೆ.
ಅದೇ ರೀತಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಮೇ 7 ರಂದು ನಾಲ್ಕು ತಿಂಗಳ ಗರ್ಭಿಣಿಯನ್ನು ಕೊಂದಿದ್ದ ಪತಿಯನ್ನು ಪೆÇಲೀಸರು ಬಂಧಿಸಿದ್ದು, ಆತನ ತಂದೆ-ತಾಯಿಯನ್ನು ಬಂಧಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು.