ಬಿಜೆಪಿ ಆದಾಯ ತೆರಿಗೆ ಇಲಾಖೆಯ ಮೂಲಕ ಕಾಂಗ್ರೆಸ್‍ಗೆ ಆರ್ಥಿಕವಾಗಿ ತೊಂದರೆ ಕೊಟ್ಟಿದೆ – ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್

ತುಮಕೂರು, ಮೇ 12-ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಆದಾಯ ತೆರಿಗೆ ಇಲಾಖೆಯ ಮೂಲಕ ಕಾಂಗ್ರೆಸ್‍ಗೆ ಆರ್ಥಿಕವಾಗಿ ತೊಂದರೆ ಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಗ್ಗೆರೆಯ ಗೊಲ್ಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ್ನು ದೃತಿಗೆಡಿಸಲು ಬಿಜೆಪಿ ಪದೇ ಪದೇ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ದಾಳಿ ಮಾಡುತ್ತಿದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬಂದಾಗ ಅಭಿವೃದ್ದಿ ವಿಷಯಗಳನ್ನು ಚರ್ಚಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಬೆಂಗಳೂರು ಮತ್ತು ರಾಜ್ಯಕ್ಕೆ ಏನಾದರೂ ಕೊಡುಗೆಗಳನ್ನು ಘೋಷಿಸಬಹುದು. ಅದರಿಂದ ಮತದಾರರು ಬಿಜೆಪಿಯತ್ತ ವಾಲಬಹುದು ಎಂಬ ಆತಂಕ ಕಾಂಗ್ರೆಸ್‍ನ್ನು ಕಾಡುತ್ತಿತ್ತು. ಆದರೆ ಮೋದಿಯವರು ಅಭಿವೃದ್ಧಿ ವಿಷಯ ಬಿಟ್ಟು ವೈಯಕ್ತಿಕ ನಿಂದನೆಗೆ ಸೀಮಿತವಾಗಿದ್ದು ಸರಿಯಲ್ಲ ಎಂದರು.
ಸೋಲಿನ ಭಯದಿಂದಾಗಿಯೇ ಅಮಿತ್ ಷಾ ಮತ್ತು ಮೋದಿಯವರು ಪದೇ ಪದೇ ರಾಜ್ಯ ಪ್ರವಾಸ ಕೈಗೊಂಡರು ಎಂದು ಅವರು ಲೇವಡಿ ಮಾಡಿದರು.
ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಲಿದೆ. ಯಾವುದೇ ಪಕ್ಷದಲ್ಲಿ ಚುನಾವಣಾ ಮೈತ್ರಿಯ ಪ್ರಸ್ತಾವವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತಾವು ವ್ಯಾಸಂಗ ಮಾಡಿದ ಗೊಲ್ಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೇ ಮತದಾನ ಮಾಡಿದ್ದು ಖುಷಿ ನೀಡಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ