ಬೆಂಗಳೂರು,ಮೇ 12
ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇದೀಗ ಮತ್ತೊಂದು ಸೇರ್ಪಡೆ ಎಂಬಂತೆ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಮತದಾನ ಮಾಡುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದಾರೆ.
ಹೌದು..ಲೈಂಗಿಕ ಅಲ್ಪಸಂಖ್ಯಾತ ಅಥವಾ ಮಂಗಳಮುಖಿಯರ ಪರ ಹೋರಾಟಗಾರ್ತಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಅಕೈ ಪದ್ಮಶಾಲಿ ಅವರು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಅವರು, ತಮ್ಮ 16 ವರ್ಷಗಳ ಸತತ ಹೋರಾಟಕ್ಕೆ ಫಲ ಸಂದಿದ್ದು, ಇದೇ ಮೊದಲ ಬಾರಿಗೆ ತಾವು ತಮ್ಮ ಹಕ್ಕನ್ನು ಚಲಾಯಿಸಿದ್ದೇನೆ. ನೀವೂ ಕೂಡ ನಿಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜ್ಞಾವಂತ ಪ್ರಜೆಯಾಗಿ ಎಂದು ಕರೆ ನೀಡಿದ್ದಾರೆ.
ಕಳೆದ 16 ವರ್ಷಗಳಿಂದ ನಾನು ನನ್ನ ಹಕ್ಕಿಗಾಗಿ ಹೋರಾಟ ನಡೆಸಿದ್ದೆ, ಆದರೆ ಈ ಬಾರಿ ನಾನು ನನ್ನ ಹಕ್ಕು ಚಲಾಯಿಸಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ನೀವೂ ಕೂಡ ನಿಮ್ಮ ಹಕ್ಕು ಚಲಾಯಿಸಿ ಎಂದು ಪದ್ಮಶಾಲಿ ಹೇಳಿದ್ದಾರೆ.
ಇನ್ನು ಈ ಹಿಂದೆ ತಮ್ಮ ವಿವಾಹ ನೋಂದಣಿ ಮಾಡಿಸುವ ಮೂಲಕವೂ ದಾಖಲೆ ಬರೆದಿದ್ದರು. ತಮ್ಮ ಹೋರಾಟಗಳ ಮೂಲಕವೇ ಖ್ಯಾತಿಗಳಿಸಿರುವ ಅಕೈ ಪದ್ಮಶಾಲಿ ಅವರಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.