ಬೆಂಗಳೂರು:ಮೇ-12: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪುತ್ರ ಯತೀಂದ್ರ ಜತೆ ಆಗಮಿಸಿ ಮತ ಚಲಾವಣೆ ಮಾಡಿದರು. ಈ ವೇಳೆ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ಹಾಸನದ ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆ ಮತಗಟ್ಟೆ ಸಂಖ್ಯೆ 244ಕ್ಕೆ ಬರಿಗಾಲಿನಲ್ಲೇ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ ಚಲಾಯಿಸಿದರು.
ಅಲ್ಲದೇ ದೇವೇಗೌಡರೊಂದಿಗೆ ಅವರ ಪತ್ನಿ ಚೆನ್ನಮ್ಮ, ಪುತ್ರ ಎಚ್.ಡಿ. ರೇವಣ್ಣ, ಸೊಸೆ ಭವಾನಿ ರೇವಣ್ಣ, ಮೊಮ್ಮಗ ಪ್ರಜ್ವಲ್ ರೇವಣ್ಣ ಕೂಡ ಮತ ಚಲಾವಣೆ ಮಾಡಿದರು.
ರಾಮನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಸಮೇತರಾಗಿ ತೆರಳಿ ಮತದಾನ ಮಾಡಿದರು.
ಕಲಬುರ್ಗಿಯ ಬಸವನಗರ ಬಡಾವಣೆಯ 108 ಮತಗಟ್ಟೆಯಲ್ಲಿ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪತ್ನಿ ರಾಧಾಬಾಯಿ ಖರ್ಗೆ ಅವರೊಂದಿಗೆ ಆಗಮಿಸಿ ಮತದಾನದ ಹಕ್ಕು ಚಲಾಯಿಸಿದರು.
ಶಿಕಾರಿಪುರದ ತಾಲೂಕು ಪಂಚಾಯಿತಿಯ ಮತಗಟ್ಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಸೊಸೆ ತೇಜಸ್ವಿನಿ,ಮೊಮ್ಮಗ ಸುಭಾಶ್ ಅವರು ಮತ ಚಲಾವಣೆ ಮಾಡಿದರು.
ಮೈಸೂರಿನ ಗುಂಗ್ರಾಲ್ ಛತ್ರ ಮತಗಟ್ಟೆಯಲ್ಲಿ ಜಿ.ಟಿ.ದೇವೇಗೌಡ ಅವರು ಪತ್ನಿ ಜತೆ ಆಗಮಿಸಿ ಮತ ಚಲಾಯಿಸಿದರು. ಈ ವೇಳೆ ಮತಗಟ್ಟೆಯಲ್ಲಿ ಮತಯಂತ್ರ ಇಟ್ಟಿದ್ದ ಸ್ಥಳದ ಕುರಿತು ಜಿ.ಟಿ. ದೇವೇಗೌಡ ಪತ್ನಿ ಆಕ್ಷೇಪ ತೆಗೆದ ಹಿನ್ನಲೆಯಲ್ಲಿ ಮತಯಂತ್ರದ ಸ್ಥಳವನ್ನು ಸಿಬ್ಬಂದಿ ಬದಲಿಸಿದರು. ಆ ಬಳಿಕವೇ ಜಿಟಿಡಿ ಪತ್ನಿ ಮತ ಚಲಾಯಿಸಿದರು.
ಇತ್ತ ತುಮಕೂರಿನ ಸಿದ್ದಾರ್ಥ ನಗರದ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 56 ರಲ್ಲಿ ಪತ್ನಿ ಕನ್ನಿಕಾ ಜತೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮತ ಚಾಲಯಿಸಿದರು.
ಹುಬ್ಬಳ್ಳಿ ಧಾರವಾಡ ಮತ ಕ್ಷೇತ್ರದ ಹುಬ್ಬಳ್ಳಿಯ ಬೂತ್ ನಂ 123ರಲ್ಲಿ ಪತ್ನಿ ಶಿಲ್ಪಾ ಶೆಟ್ಟರ್ ಜತೆ ಆಗಮಿಸಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ ಚಲಾಯಿಸಿದರು.
ಇತ್ತ ಹುಬ್ಬಳ್ಳಿಯ ಗದಗ ರಸ್ತೆಯ ರೈಲ್ವೆ ಹೈಸ್ಕೂಲ್ನ ಬೂತ್ ನಂ. 125ರಲ್ಲಿಬಿಜೆಪಿ ಮುಖಂಡ ಡಾ. ವಿಜಯ ಸಂಕೇಶ್ವರ, ಬಾದಾಮಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್, ಬಾದಾಮಿಯ ಶಾಸಕರ ಮಾದರಿ ಶಾಲೆಯಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಮತದಾನ ಮಾಡಿದರು.
ಗದಗ ತಾಲೂಕಿನ ಹುಲಕೋಟಿ ಗ್ರಾಮದ ಮತಗಟ್ಟೆ ಸಂಖ್ಯೆ 133 ರಲ್ಲಿ ತಾಯಿಯೊಂದಿಗೆ ಬಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಮತಚಲಾಯಿಸಿದರು.
ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಪತ್ನಿ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಕ್ಷೇತ್ರದ ಹಾಲಹಳ್ಳಿಯಲ್ಲಿ ಪುತ್ರ ಗಣೇಶ್ ಪ್ರಸಾದ್ ಮತ್ತು ಕುಟುಂಬವರ್ಗದವರೊಡನೆ ಸಣ್ಣಕೈಗಾರಿಕೆ ಹಾಗೂ ಸಕ್ಕರೆ ಖಾತೆ ರಾಜ್ಯ ಸಚಿವೆ ಗೀತಾ ಮಹದೇವಪ್ರಸಾದ್ ಅವರು ಮತದಾನ ಮಾಡಿದರು.
ದಕ್ಷಿಣ ಕನ್ನಡದ ರಂತಡ್ಕ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಸಚಿವ ಯು.ಟಿ.ಖಾದರ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ, ಉಡುಪಿಯ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತ್ನಿ ಜತೆ ಆಗಮಿಸಿ ಆಸ್ಕರ್ ಫರ್ನಾಂಡಿಸ್, ವಿಜಯಪುರದ ಮಗತಟ್ಟೆ ಸಂಖ್ಯೆ 38 ರಲ್ಲಿ ಪತ್ನಿ ಆಶಾ ಪಾಟೀಲ್ ಸಮೇತ ಆಗಮಿಸಿ ಸಚಿವ ಎಂ ಬಿ ಪಾಟೀಲ್ ಮತದಾನ ಮಾಡಿದರು.
ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದ 4ನೇ ವಾರ್ಡ್ನಲ್ಲಿ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ಲು ಮತಗಟ್ಟೆ ಸಂಖ್ಯೆ 36 ರಲ್ಲಿ ಸಚಿವ ಕೆ.ಆರ್. ರಮೇಶ್ ಕುಮಾರ್, ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ 102ರಲ್ಲಿ ಪುತ್ರ ಮತ್ತು ಪುತ್ರಿ ಜತೆ ಆಗಮಿಸಿ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮತ ಚಲಾಯಿಸಿದರು.
ರಾಜಾಜಿನಗರದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್, ಪುತ್ತೂರಿನಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ ಚಲಾಯಿಸಿದರು. ಶಿರಸಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮತ ಚಲಾವಣೆ ಮಾಡಿದರು.