ಬೆಂಗಳೂರು, ಮೇ 11-ಚುನಾವಣಾ ಪ್ರಚಾರದ ಅಬ್ಬರ ಮುಗಿಯುತ್ತಿದ್ದಂತೆ, ನಿನ್ನೆಯಿಂದ ಕಾಂಚಾಣದ ಅಬ್ಬರ ಜೋರಾಗಿದೆ. ಇದನ್ನು ನಿಯಂತ್ರಿಸಲು ಚುನಾವಣಾಧಿಕಾರಿಗಳು, ಪೆÇಲೀಸರು ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾರೀ ಬಹಿರಂಗ ಪ್ರಚಾರ ನಿನ್ನೆಯಷ್ಟೆ ಮುಕ್ತಾಯಗೊಂಡ ಬೆನ್ನಲ್ಲೇ ವಿವಿಧ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಹಣ ಹಂಚಿಕೆ ಕಾರುಬಾರು ಶುರುವಿಟ್ಟುಕೊಂಡಿದ್ದಾರೆ. ಹದ್ದಿನ ಕಣ್ಣಿಟ್ಟಿದ್ದ ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳು, ಪೆÇಲೀಸ್ ಸಿಬ್ಬಂದಿ ಬೆಂಗಳೂರು, ಕೋಲಾರ, ಕೊಪ್ಪಳ, ಕಾರವಾರ, ಉಡುಪಿ, ಚಿತ್ರದುರ್ಗ, ಬ್ರಹ್ಮಾವರ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಿಂದ ಮೊಳಕಾಲ್ಮೂರಿಗೆ ಸ್ಕಾರ್ಪಿಯೋ ಕಾರಿನಲ್ಲಿ ತರುತ್ತಿದ್ದ ಬರೋಬ್ಬರಿ ಸುಮಾರು 2.17 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ.
ಮೊಳಕಾಲ್ಮೂರು ತಾಲೂಕಿನ ಎದ್ದಲಬೊಮ್ಮನಹಟ್ಟಿ ಗ್ರಾಮದ ಬಳಿ ಗಡಿ ಭಾಗದಲ್ಲಿರುವ ಚೆಕ್ಪೆÇೀಸ್ಟ್ನಲ್ಲಿ ತಪಾಸಣೆ ನಡೆಸುವ ವೇಳೆ ಬಳ್ಳಾರಿ ಮೂಲದ ಸ್ಕಾರ್ಪಿಯೋ ಕಾರಿನಲ್ಲಿ ಈ ಹಣ ಪತ್ತೆಯಾಗಿದೆ.
ಆಂಧ್ರದ ರಾಯದುರ್ಗ ಕಡೆಯಿಂದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿಗೆ ಈ ಕಾರು ಬರುತ್ತಿತ್ತು. ಉದ್ಯಮಿ ಕಾಳಿಂಗರೆಡ್ಡಿ ಒಡೆತನದ ಸ್ಕಾರ್ಪಿಯೋ ಕಾರು ಇದಾಗಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕೋಲಾರದಲ್ಲಿ ಸಿಮೆಂಟ್ ಲಾರಿಯಲ್ಲಿ ಮೂಟೆಯಲ್ಲಿ ಸಾಗಿಸುತ್ತಿದ್ದ ಸುಮಾರು 70 ಲಕ್ಷ ರೂ. ಹಣವನ್ನು ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕೊಂಡರಾಜನಹಳ್ಳಿ ಸಮೀಪ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ ಸತ್ಯವತಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿ ಲಾರಿ ಚಾಲಕ ಹಾಗೂ ಕ್ಲೀನರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆನೂರು ಅಸೋಸಿಯೇಟ್ಸ್ನಿಂದ ಲೋಡ್ ಆದ ಲಾರಿ, ಬೆಂಗಳೂರಿನ ಪ್ರಕಾಶ್ನಗರದ ಕಾಂಟ್ರಾಕ್ಟರ್ ವೆಂಕಟೇಶ್ ಅವರ ವಿಳಾಸಕ್ಕೆ ಬಿಲ್ ಆಗಿತ್ತು. ಈ ಲಾರಿಯಲ್ಲಿ ಹಣ ತುಂಬಿದ ಮೂಟೆಯೊಂದಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರಾತ್ರಿ 10.30ರ ಸುಮಾರಿನಲ್ಲಿ ಲಾರಿಯನ್ನು ಕಚೇರಿಗೆ ತಂದು ತಪಾಸಣೆ ನಡೆಸಿದಾಗ ಹಣದ ಮೂಟೆ ಇರುವುದು ಪತ್ತೆಯಾಗಿದೆ. ಮೂಟೆಯಲ್ಲಿ ಸುಮಾರು 70 ಲಕ್ಷ ಹಣವಿದ್ದು, ಅದನ್ನು ಜಪ್ತಿ ಮಾಡಿ ಚಾಲಕ ನವಾಜ್ ಪಾಷ ಹಾಗೂ ಕ್ಲೀನರ್ ಶಂಕರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ದಾಖಲೆ ಇಲ್ಲದೆ ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ 17 ಲಕ್ಷ ರೂ.ಗಳನ್ನು ಚುನಾವಣಾಧಿಕಾರಿಗಳು ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಸಮೀಪದ ನವಯುಗ ಟೋಲ್ ಬಳಿಯ ಚೆಕ್ಪೆÇೀಸ್ಟ್ನಲ್ಲಿ ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ದೇವನಹಳ್ಳಿ ತೆರಳುವಾಗ ಈ ಕಾರನ್ನು ತಪಾಸಣೆ ಮಾಡಿದಾಗ ಈ ಹಣ ಪತ್ತೆಯಾಗಿದೆ.
ನವೀನ್ಕುಮಾರ್ ಎಂಬಾತ ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿದ್ದಾಗ ಹಣ ಜಪ್ತಿ ಮಾಡಿರುವ ಪೆÇಲೀಸರು ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 20 ಲಕ್ಷ ಹಣವನ್ನು ಬಾಗಲಕೋಟೆ ಜಿಲ್ಲೆ ಇಳಕಲ್ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ವಶಪಡಿಸಿಕೊಂಡಿದೆ.
ಸಂದೀಪ್ ಮಂಜಿ ಎಂಬುವರ ಮನೆಯಲ್ಲಿ ಈ ಹಣವನ್ನು ವಶಪಡಿಸಿಕೊಂಡಿದ್ದು, ಉದ್ಯಮಿ ಕಮಲ್ಲಾಲ್ ಶರ್ಮಾ ಎಂಬುವರಿಗೆ ಈ ಹಣ ಸೇರಿದ್ದು, ಇಳಕಲ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.
ಗಂಗಾವತಿ ಬಿಜೆಪಿ ಅಭ್ಯರ್ಥಿಯ ಮನೆಯ ಮೇಲೆ ದಾಳಿ ನಡೆಸಿರುವ ಚುನಾವಣಾಧಿಕಾರಿಗಳು ಹಾಗೂ ಪೆÇಲೀಸ್ ಅಧಿಕಾರಿಗಳು ಸುಮಾರು 30 ಸಾವಿರ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
ಕಾರವಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಪ್ತರಾದ ಉದ್ಯಮಿ ಮಂಗಲದಾಸ್ ಕಾಮತ್ ಅವರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ. ಅಂಕೋಲಾದ ಅವಾರ್ಸಿಕ ಗ್ರಾಮದಲ್ಲಿರುವ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇದಲ್ಲದೆ ಚುನಾವಣಾ ಸಂದರ್ಭದಲ್ಲಿ ಭಾರೀ ಹಣದ ವಹಿವಾಟು ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಸಚಿವ ವಿನಯ್ಕುಲಕರ್ಣಿ ಆಪ್ತ ಪ್ರಶಾಂತ್ ಕೆಕೇರೆ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.