ಉತ್ತರ ಪ್ರದೇಶ,ಮೇ 11- ಮೊಹಮ್ಮದ್ ಆಲಿ ಜಿನ್ನಾ ಒಬ್ಬ ಮಹಾಪುರುಷ ಎಂದು ಹೇಳುವ ಮೂಲಕ ಬಹ್ರೈಚ್ ಕ್ಷೇತ್ರದ ಸಂಸದೆ ಸಾವಿತ್ರಿ ಬಾಯಿ ಫುಲೆ ಸ್ವಪಕ್ಷೀಯರಿಗೆ ಶಾಕ್ ನೀಡಿದ್ದಾರೆ.
ಆಲಿಘರ್ ಮುಸ್ಲಿಂ ಯೂನಿವರ್ಸಿಟಿಯಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರವರ ಭಾವಚಿತ್ರ ಹಾಕಿರುವುದಕ್ಕೆ ಕೆಲ ಬಿಜೆಪಿ ನಾಯಕರು ಅಪಸ್ವರ ಎತ್ತಿರುವುದರ ಮಧ್ಯೆ ಸಂಸದೆ ಇಂತಹ ಹೇಳಿಕೆ ನೀಡಿದ್ದಾರೆ.
ಈ ಹಿಂದೆಯೂ ಕೇಂದ್ರ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರವನ್ನು ಟೀಕಿಸಿ ಬಿಜೆಪಿಗೆ ಮುಜುಗರ ತಂದಿದ್ದ ಸಾವಿತ್ರಿ ಬಾಯಿ ಫುಲೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ, ಭಾರತ ವಿಭಜನೆಗೂ ಮುನ್ನ ಮೊಹಮ್ಮದ್ ಆಲಿ ಜಿನ್ನಾ ಕೂಡಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಅವರ ಭಾವಚಿತ್ರ ಹಾಕಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಸಂಸದೆ ಸಾವಿತ್ರಿ ಬಾಯಿ ಫುಲೆ, ಈ ಹಿಂದೆಯೂ ದಲಿತರ ಮನೆಯಲ್ಲಿ ಪಕ್ಷದ ಕೆಲ ನಾಯಕರು ಭೋಜನ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಮೊಹಮ್ಮದ್ ಆಲಿ ಜಿನ್ನಾ ಭಾವಚಿತ್ರ ವಿವಾದ ಕುರಿತಂತೆ ಪಕ್ಷದ ನಾಯಕರ ಹೇಳಿಕೆಗೆ ತಿರುಗೇಟು ನೀಡುವ ಮೂಲಕ ಮತ್ತೊಂದು ಶಾಕ್ ಕೊಟ್ಟಿದ್ದಾರೆ.