ಬೆಂಗಳೂರು,ಮೇ11-ದೇಶದ ಗಮನ ಸೆಳೆದಿರುವ ರಾಜ್ಯದ 15ನೇ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಘಟಾನುಘಟಿ ನಾಯಕರ ಹಣೆಬರಹವನ್ನು ಮತದಾರರು ನಾಳೆ ಬರೆಯಲಿದ್ದಾರೆ.
ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6.30ರವರೆಗೆ ರಾಜ್ಯದ ಒಟ್ಟು 223(ಜಯನಗರ ಹೊರತುಪಡಿಸಿ) ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕೆಲವು ಕಡೆ ಮಳೆಯಾಗಬಹುದೆಂಬ ಹಿನ್ನೆಲೆಯಲ್ಲಿ ಮತದಾನಕ್ಕೆ ಅರ್ಧಗಂಟೆ ಹೆಚ್ಚುವರಿ ಸಮಯ ಅವಕಾಶವನ್ನು ಆಯೋಗ ನೀಡಿದೆ.
2,52,05,820 ಪುರುಷ ಹಾಗೂ 2,23,15,727 ಮಹಿಳಾ ಮತದಾರರು, ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 5,12,24,351 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇದರಲ್ಲಿ ಸೈನಿಕರು, ಅನಿವಾಸಿ ಭಾರತೀಯರಿಗೆ ಅಂಚೆ ಮೂಲಕ ಮತದಾನ ಮಾಡುವ ಅವಕಾಶವನ್ನು ಆಯೋಗ ಕಲ್ಪಿಸಿದೆ.
ರಾಜ್ಯಾದ್ಯಂತ 60 ಪಿಂಕ್ ಮತಗಟ್ಟೆ ಸೇರಿದಂತೆ ಒಟ್ಟಿ 58,302 ಮತಗಟ್ಟೆಗಳನ್ನು ತೆರೆಯಲಾಗಿದ್ದು 73,185 ನಿಯಂತ್ರಣ ಘಟಕಗಳು, 87,819 ಬ್ಯಾಲೆಟ್ ಘಟಕಗಳು, 1503 ಚೆಕ್ಪೆÇೀಸ್ಟ್ , 1361 ವಿಶೇಷ ಘಟಕಗಳನ್ನು ತೆರೆಯಲಾಗಿದೆ.
ಜೊತೆಗೆ 3362 ಮೊಬೈಲ್ ಪ್ಯಾಟ್ರೊಲಿಂಗ್ , 907 ಸೆಕ್ಟರ್ ಮೊಬೈಲ್ಸ್, 373 ಡಿಎಸ್ಪಿ ಮೊಬೈಲ್ಸ್ , 472ಫ್ಲೈಯಿಂಗ್ ಸ್ಕ್ವಾಡ್ಸ್ , 465 ಸರ್ವೆಲೆನ್ಸ್ ತಂಡ, 84 ಸ್ಟ್ರಾಂಗ್ ರೂಮ್ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಮತದಾರರು ತಾವು ಚಲಾಯಿಸಿದ ಮತದಾನವನ್ನು ಖಚಿತಪಡಿಸಿಕೊಳ್ಳಲು ವಿವಿಪ್ಯಾಟ್ ಕೂಡ ಅಳವಡಿಸಲಾಗಿದೆ.
ಬಿಜೆಪಿ 223, ಕಾಂಗ್ರೆಸ್ 222, ಜೆಡಿಎಸ್ 201, ಬಿಎಸ್ಪಿ 18, ಸಿಪಿಐಎಂ 19, ಎನ್ಸಿಪಿ 14, ಪಕ್ಷೇತರರು 1155 ಸ್ಪರ್ಧಾ ಕಣದಲ್ಲಿದ್ದಾರೆ. ಇದರಲ್ಲಿ ಪುರುಷರು 2436 ಹಾಗೂ ಮಹಿಳೆ 219 ಸೇರಿದಂತೆ ಒಟ್ಟು ಕಣದಲ್ಲಿ 2655 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ರಾಜ್ಯಾದ್ಯಂತ ಸಿಆರ್ಪಿಎಫ್, ಬಿಎಸ್ಎಫ್, ಕೆಎಸ್ಆರ್ಪಿ, ಆರ್ಎಎಫ್ ಸೇರಿದಂತೆ 56,696 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದರಲ್ಲಿ ರಾಮನಗರ, ಕನಕಪುರ, ಶಿಕಾರಿಪುರ, ಮೊಳಕಾಲ್ಮೂರು, ಬಾದಾಮಿ, ಬೆಳಗಾವಿ ಗ್ರಾಮಾಂತರ, ಗೋವಿಂದರಾಜನಗರ ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಅತಿಸೂಕ್ಷ್ಮ ಕ್ಷೇತ್ರಗಳೆಂದು ಘೋಷಣೆ ಮಾಡಲಾಗಿದೆ. ಈ ಕ್ಷೇತ್ರಗಳಿಗೆ ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.
ನಕ್ಸಲ್ ಪೀಡಿತ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಮಲೆನಾಡಿನ ಭಾಗಗಳಲ್ಲಿ ವಿಶೇಷ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಮತದಾನಕ್ಕೆ ಅಡ್ಡಿ ಪಡಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆಯೋಗ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ರೀತಿಯ ಬಿಗಿಯಾದ ಕ್ರಮಗಳನ್ನು ಕೈಗೊಂಡಿದೆ. ಯಾರಾದರೂ ಮತದಾರರ ಮೇಲೆ ಪ್ರಭಾವ ಬೀರಿದರೆ ಚುನಾವಣಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ಯುವಕರೇ ಟಾರ್ಗೆಟ್:
ಈ ಬಾರಿಯ ಚುನಾವಣೆಯಲ್ಲಿ 18ರಿಂದ 30 ವರ್ಷದೊಳಗಿನ ಸುಮಾರು 30 ಲಕ್ಷಕ್ಕೂ ಹೆಚ್ಚು ಯುವ ಮತದಾರರು ಪ್ರಮುಖ ಪಕ್ಷಗಳ ಟಾರ್ಗೆಟ್ ಆಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಮತ್ತಿತರ ಪಕ್ಷಗಳು ಈ ಯುವಕರನ್ನೇ ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ.
ಘಟಾನುಘಟಿ ನಾಯಕರ ಹಣೆಬರಹ ನಿರ್ಧಾರ:
ನಾಳೆ ನಡೆಯಲಿರುವ ಮತದಾನದಲ್ಲಿ ಪ್ರಮುಖ ಮೂರು ಪಕ್ಷಗಳು ಸೇರಿದಂತೆ ಅನೇಕ ನಾಯಕರ ಹಣೆಬರಹವನ್ನು ಮತದಾರರ ಬರೆಯಲಿದ್ದಾನೆ. ಬಹುತೇಕ ಕೊನೆಯ ಚುನಾವಣೆಯ ಹೊಸ್ತಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಇದು ಕೊನೆಯ ಚುನಾವಣೆಯಾಗಲಿದೆ. ಇನ್ನು ಕಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್(ಹುಬ್ಬಳ್ಳಿ-ಧಾರವಾಡ ಕೇಂದ್ರ), ಎಚ್.ಡಿ.ಕುಮಾರಸ್ವಾಮಿ (ರಾಮನಗರ -ಚನ್ನಪಟ್ಟಣ) ಕಣದಲ್ಲಿರುವ ಪ್ರಮುಖರು.
ಇದೇ ರೀತಿ ಸಚಿವರಾದ ರಾಮಲಿಂಗಾರೆಡ್ಡಿ(ಬಿಟಿಎಂ ಲೇಔಟ್), ಡಿ.ಕೆ.ಶಿವಕುಮಾರ್(ಕನಕಪುರ), ಕೆ.ಜೆ.ಜಾರ್ಜ್(ಸರ್ವಜ್ಞನಗರ), ಎಚ್.ಸಿ.ಮಹದೇವಪ್ಪ (ತೀನರಸೀಪುರ), ಎಂ.ಕೃಷ್ಣಪ್ಪ(ವಿಜಯನಗರ), ಟಿ.ಬಿ.ಜಯಚಂದ್ರ(ಶಿರಾ), ಎಚ್.ಆಂಜನೇಯ(ಹೊಳಲ್ಕೆರೆ), ಎಂ.ಬಿ.ಪಾಟೀಲ್ (ಬಬಲೇಶ್ವರ), ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್(ಕೊರಟಗೆರೆ), ಶ್ರೀರಾಮುಲು( ಬಾದಾಮಿ-ಮೊಳಕಾಲ್ಮೂರು), ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ), ಶಾಮನೂರು ಶಿವಶಂಕರಪ್ಪ(ದಾವಣಗೆರೆ ಉತ್ತರ) ಸೇರಿದಂತೆ ಅನೇಕ ನಾಯಕರ ಭವಿಷ್ಯ ನಾಳೆ ಮತ ಪೆಟ್ಟಿಗೆಯಲ್ಲಿ ತೀರ್ಮಾನವಾಗಲಿದೆ.
ಅಲ್ಲದೆ ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ವಿ.ಸೋಮಣ್ಣ , ಎಂ.ಪಿ.ರೇಣುಕಾಚಾರ್ಯ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್, ಎ.ರಾಮದಾಸ್, ಅಪ್ಪಚ್ಚು ರಂಜನ್ ಮತ್ತಿತರರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.
ಪ್ರಮುಖವಾಗಿ ಈ ಚುನಾವಣೆಯಲ್ಲಿ ರಾಜ್ಯದಲ್ಲೇ ಅತ್ಯಂತ ಹೈವೋಲ್ಟೇಜ್ ಕ್ಷೇತ್ರಗಳೆನಿಸಿರುವ ಚಾಮುಂಡೇಶ್ವರಿ, ರಾಮನಗರ, ಶಿಕಾರಿಪುರ, ಮೊಳಕಾಲ್ಮೂರು, ಬಾದಾಮಿ ಕ್ಷೇತ್ರಗಳಲ್ಲಿ ಮತದಾರನ ಚಿತ್ತ ಯಾರತ್ತ ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿದೆ.
ಉಳಿದಂತೆ ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕರು ಮತ ಪ್ರಚಾರ ನಡೆಸಿದ್ದರು.
ಮತದಾರ ಯಾರ ಕೈ ಹಿಡಿಲಿದ್ದಾರೆ ಎಂಬುದು ಮೇ 15ರಂದು ಪ್ರಕಟವಾಗಲಿರುವ ಫಲಿತಾಂಶದಲ್ಲಿ ನಿರ್ಧಾರವಾಗಲಿದೆ.